ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಇನ್ನಷ್ಟು ವೀಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪ್ರಯೋ ಗಾಲಯ(ಎಫ್ಎಸ್‌ಎಲ್)ಕ್ಕೆ ಕಳುಹಿಸಿದ್ದಾರೆ.
ಕೆಲವು ಖಾಸಗಿ ಸುದ್ದಿವಾಹಿನಿಗಳು ಘಟನೆ ಬಗ್ಗೆ ಪ್ರಸಾರ ಮಾಡಿದ ವೀಡಿಯೋ ತುಣುಕುಗಳನ್ನು ಪೊಲೀಸರು ಕಳುಹಿಸಿದ್ದರು. ಆದರೆ ಇನ್ನಷ್ಟು ವೀಡಿಯೋ ತುಣುಕುಗಳನ್ನು ಕಳುಹಿಸುವಂತೆ ಎಫ್ಎಸ್‌ಎಲ್ ಸೂಚಿಸಿತ್ತು. ಅದರಂತೆ ವಿಧಾನಸೌಧದ ಮೊಗಸಾಲೆಯಲ್ಲಿರುವ ಸಿಸಿ ಕೆಮರಾ ತುಣುಕುಗಳನ್ನು ಸಂಗ್ರಹಿಸಿ ಎಫ್ಎಸ್‌ಎಲ್‌ಗೆ ನೀಡಲಾಗಿದೆ.
ಪೊಲೀಸರು ಇದುವರೆಗೆ 14 ಮಂದಿಯನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಬೆಂಬಲಿಗ ಬ್ಯಾಡಗಿ ಮಹಮ್ಮದ್ ಶಫಿ ಸಹಿತ ಮೂವರ ಧ್ವನಿಗಳ ಮಾದರಿಗಳನ್ನು ಪಡೆದುಕೊಳ್ಳಲಾಗಿದ್ದು, ಅದನ್ನೂ ಎಫ್ಎಸ್‌ಎಲ್‌ಗೆ ರವಾನಿಸಲಾಗಿದೆ. ಎಫ್ಎಸ್‌ಎಲ್ ವರದಿ ಬಂದ ಬಳಿಕವಷ್ಟೇ ಸ್ಪಷ್ಟರೂಪ ಸಿಗಬೇಕಿದೆ.
ಪಾಕ್ ಪರ ಘೋಷಣೆ ಕೂಗಿರುವುದು ಎಫ್ಎಸ್‌ಎಲ್ ವರದಿಯಲ್ಲಿ ಸ್ಪಷ್ಟವಾಗಿದೆ ಎಂಬ ಮಾಹಿತಿ ಇದೆ. ಘೋಷಣೆ ಕೂಗಿದವರು ಭಯೋತ್ಪಾದಕರಿಗೆ ಸಹಕಾರ ನೀಡುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಸರಕಾರ ಯಾವುದೇ ಕಾರಣಕ್ಕೂ ವರದಿ ಮುಚ್ಚಿಡಬಾರದು. ತತ್‌ಕ್ಷಣ ಬಹಿರಂಗಪಡಿಸಬೇಕು.
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ