Advertisement

ಪಾಕ್‌ ಪರ ಘೋಷಣೆ; ಬಿಡುಗಡೆ ಮಾಡಬೇಡಿ

11:21 PM Feb 16, 2020 | Team Udayavani |

ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಹೊತ್ತ ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂಬ ವದಂತಿಗೆ ಕಾಂಗ್ರೆಸ್‌ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ, ಪೊಲೀಸ್‌ ಇಲಾಖೆಯ ಕಾರ್ಯ ವೈಖರಿ ಬಗ್ಗೆಯೂ ಕಿಡಿ ಕಾರಿದ್ದಾರೆ. ನಗರದಲ್ಲಿ ಭಾನುವಾರ ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸರು ಒಂದೊಂದು ಪ್ರಕರಣದಲ್ಲಿ ಒಂದೊಂದು ರೀತಿಯಲ್ಲಿ ಕ್ರಮ ಕೈಗೊಂಡು ತಾರತಮ್ಯ ಮಾಡುತ್ತಿದ್ದಾರೆ.

Advertisement

ಪಾಕ್‌ ಪರ ಘೋಷಣೆ ಕೂಗುವುದು ನಿಜವಾದ ದೇಶ ದ್ರೋಹ. ಆದರೂ, ವಿದ್ಯಾರ್ಥಿಗಳನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ಬೀದರ್‌ನ ಶಾಹಿನ್‌ ಶಾಲೆ ಘಟನೆಗೆ ದೇಶದ್ರೋಹದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆದರೆ, ಅಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಏಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಎಂಬ ಕಾರಣಕ್ಕೆ ಬಿಡುಗಡೆ ಮಾಡಿದ್ದಾರೋ ಏನೋ ಗೊತ್ತಿಲ್ಲ. ಈ ಕುರಿತು ಮಾಹಿತಿ ಪಡೆಯುತ್ತೇನೆ. ಈ ಎಲ್ಲ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಸೂಚನೆಯಂತೆ ಪೊಲೀಸರ ಕಾರ್ಯ ನಿರ್ವಹಣೆ: ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಈ ಹಿಂದೆ ರಾಜ್ಯ ಪೊಲೀಸರು ದಕ್ಷರಾಗಿದ್ದರು. ಆದರೆ, ಈಗ ಪೊಲೀಸ್‌ ಇಲಾಖೆಯಲ್ಲೂ ರಾಜಕೀಯ ನುಸುಳಿದೆ. ದೇಶ ದ್ರೋಹದ ಆರೋಪ ಹೊತ್ತ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಿಡು ಗಡೆ ಮಾಡಿದ್ದಾರೆ ಎನ್ನಲಾದ ಸಂಗತಿ ಪೊಲೀಸರ ನಡೆ ಬಗ್ಗೆ ಅನುಮಾನ ಮೂಡಿಸುತ್ತಿದೆ. ಪೊಲೀಸರು ಬಿಜೆಪಿ ಸೂಚನೆ ಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾರ ಮೇಲೆ ಪ್ರಕರಣ ದಾಖಲಿಸುವ ಅಗತ್ಯವಿಲ್ಲವೋ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದರೆ, ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಬಿಡುಗಡೆ ಮಾಡುತ್ತಾರೆ ಎಂದರೆ ಏನರ್ಥ. ಬಿಜೆಪಿ ಸಂಸದ ಅನಂತ ಕುಮಾರ್‌ ಹೆಗಡೆ, ಸಚಿವ ಸಿ.ಟಿ.ರವಿ, ಶಾಸಕ ಜಿ.ಸೋಮ ಶೇಖರ ರೆಡ್ಡಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಮಹಾತ್ಮ ಗಾಂಧಿ ವಿರುದ್ಧ ಮಾತನಾಡಿದರೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ತನಿಖೆ ಮಾಡದೆ ಬಿಟ್ಟಿದ್ದಾರೆ ಎನ್ನಲಾಗಿದೆ. ಸಣ್ಣ ಪುಟ್ಟ ಒತ್ತಡಗಳು ಸಹಜವಾಗಿ ಇರುತ್ತವೆ. ಆದರೆ, ಇದು ವಿಪರೀತವಾಗಿದೆ ಎಂದು ಕಿಡಿ ಕಾರಿದರು.

ಪೊಲೀಸರ ನಡೆ ಬಗ್ಗೆ ಶಂಕೆ: ಮಾಜಿ ಸಚಿವ ಯು.ಟಿ.ಖಾದರ್‌ ಮಾತನಾಡಿ, ಪೊಲೀಸ್‌ ಇಲಾಖೆಯು ಸರ್ಕಾರದ ಕೈಗೊಂಬೆಯಾಗಿದೆ. ಪೊಲೀಸರ ನಡೆ ಬಗ್ಗೆ ಜನರಿಗೆ ಸಂಶಯ ಶುರುವಾಗಿದೆ. ಸರ್ಕಾರಕ್ಕಿಂತ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ನ್ಯಾಯಪರವಾಗಿ ನಡೆದುಕೊಳ್ಳುತ್ತಿಲ್ಲ. ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಹೇಳಿದಂತೆ ಆಯುಕ್ತರು, ಆಯುಕ್ತರು ಹೇಳಿದಂತೆ ಇನ್‌ಸ್ಪೆಕ್ಟರ್‌ ಕೇಳುತ್ತಾರೆ. ಬೀದರ್‌ನ ಶಾಹಿನ್‌ ಶಾಲೆ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಅದೇ ಹುಬ್ಬಳ್ಳಿಯ ಪ್ರಕರಣ ಕೈಬಿಡಲು ಪ್ರಯತ್ನಿಸುತ್ತಾರೆ. ಸರ್ಕಾರ ಬರುತ್ತದೆ, ಹೋಗುತ್ತದೆ. ಆದರೆ, ಅಧಿಕಾರಿಗಳು ಕಾನೂನು ಪರ ನಡೆದುಕೊಳ್ಳಬೇಕಲ್ಲವೇ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next