ಪೊಚೆಫ್ಸೂಮ್: ಪ್ರೊ ಲೀಗ್ ಹಾಕಿ ಪಂದ್ಯಾವಳಿಯ ದಕ್ಷಿಣ ಆಫ್ರಿಕಾ ಆವೃತ್ತಿಯಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ.
ಆತಿಥೇಯ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಪಂದ್ಯವನ್ನು 10-2 ಅಂತರದಿಂದ ಜಯಿಸಿದೆ. ಮಂಗಳವಾರದ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 5-0 ಗೆಲುವು ಸಾಧಿಸಿತ್ತು.
ಯುವ ಡ್ರ್ಯಾಗ್ ಫ್ಲಿಕರ್ ಜುಗ್ರಾಜ್ ಸಿಂಗ್ ಅವರ ಹ್ಯಾಟ್ರಿಕ್ ಭಾರತದ ಮೆರೆದಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು ಪಂದ್ಯದ 4ನೇ, 6ನೇ ಹಾಗೂ 23ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಉಳಿದಂತೆ ಗುರುಸಾಹಿಬ್‌ಜಿತ್ ಸಿಂಗ್ ಮತ್ತು ದಿಲ್‌ಪ್ರೀತ್ ಸಿಂಗ್ ತಲಾ 2 ಗೋಲು ಬಾರಿಸಿದರು. ಉಳಿದ ಗೋಲುವೀರರೆಂದರೆ ಹರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ಮತ್ತು ಮನ್‌ದೀಪ್ ಸಿಂಗ್. ಅರ್ಧ ಹಾದಿ ಕ್ರಮಿಸುವಾಗಲೇ ಭಾರತ 8-0 ಗೋಲುಗಳ ಮುನ್ನಡೆಯಲ್ಲಿತ್ತು. ಶನಿವಾರ ಮತ್ತೆ ಭಾರತ-ಫ್ರಾನ್ಸ್ ಮುಖಾಮುಖಿ ಆಗಲಿವೆ.
ಹಿಂದೆ ಸರಿದ ನೆದರ್ಲೆಂಡ್ಸ್
ಭಾರತದ ವಿರುದ್ಧ 2 ಪ್ರೊ ಲೀಗ್ ಹಾಕಿ ಪಂದ್ಯಗಳನ್ನು ಆಡಬೇಕಿದ್ದ ನೆದರ್ಲೆಂಡ್ಸ್ ವನಿತಾ ತಂಡ ಹಿಂದೆ ಸರಿದಿದೆ.
ನೆದರ್ಲೆಂಡ್ಸ್‌ನಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವುದರಿಂದ ರಾಯಲ್ ಡಚ್ ಹಾಕಿ ಅಸೋಸಿಯೇಶನ್ ಈ ನಿರ್ಧಾರಕ್ಕೆ ಬಂದಿದೆ.
ಈ ಪಂದ್ಯಗಳನ್ನು ಫೆ. 19 ಮತ್ತು 20ರಂದು ಭುವನೇಶ್ವರದಲ್ಲಿ ಆಡಬೇಕಿತ್ತು. ಇವುಗಳನ್ನು ಮುಂದಿನ ದಿನಾಂಕದಲ್ಲಿ ಆಡಲಾಗುವುದು ಎಂದು ಎಫ್ಐಎಚ್ ಪ್ರಕಟಿಸಿದೆ. ನೆದರ್ಲೆಂಡ್ಸ್ ನಿರ್ಧಾರಕ್ಕೆ ಹಾಕಿ ಇಂಡಿಯಾ ಅಚ್ಚರಿ ವ್ಯಕ್ತಪಡಿಸಿದೆ.