ಬೆಂಗಳೂರು: ಕನ್ನಡ ನಾಡು, ನುಡಿ, ನೆಲ, ಜಲ ವಿಷಯದಲ್ಲಿ ಹೋರಾಟ ಮಾಡುತ್ತಾ ಬಂದಿರುವ ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಖಂಡಿಸಿದೆ.
ಅಲ್ಲದೆ ಕನ್ನಡ ನಾಮಫಲಕ ವಿಷಯದಲ್ಲಿ ಹೋರಾಟ ಮಾಡಿ ಬಂಧನಕ್ಕೆ ಒಳಗಾಗಿರುವ ಕನ್ನಡಪರ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಎನ್. ಎಂ. ಸುರೇಶ್, “ಅನೇಕ ದಶಕಗಳಿಂದ ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡಪರ ಹೋರಾಟಗಾರರು ಈ ರಾಜ್ಯದ ನೆಲ, ಜಲ, ಭಾಷೆಯ ವಿಷಯದಲ್ಲಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಗ ನಾಮಫಲಕ ವಿಷಯದಲ್ಲೂ ಹೋರಾಟ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಅವರ ಹೋರಾಟ ನ್ಯಾಯಯುತವಾದದ್ದು. ಕನ್ನಡ ನಾಡು, ನುಡಿ ವಿಷಯದಲ್ಲಿ ಇಡೀ ಚಿತ್ರೋದ್ಯಮ ಕನ್ನಡಪರ ಹೋರಾಟಗಾರರ ಪರವಾಗಿ ನಿಲ್ಲುತ್ತದೆ. ಕೂಡಲೇ ಬಂಧನಕ್ಕೆ ಒಳಗಾಗಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ’ ಎಂದರು.
“ಕನ್ನಡೇತರರು ಮನೆಯಲ್ಲಿ ಯಾವ ಭಾಷೆ ಬೇಕಾದರು ಮಾತನಾಡಲಿ ಆದರೆ, ವ್ಯವಹರಿಸುವ ಜಾಗದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರದ ನಿರ್ದೇಶನದಂತೆ, ಕರ್ನಾಟಕದಲ್ಲಿರುವ ಎಲ್ಲ ನಾಮಫಲಕಗಳಲ್ಲೂ 60-40 ಆದೇಶವನ್ನು ಎಲ್ಲರೂ ಪಾಲಿಸಬೇಕು. ಸರ್ಕಾರದ ಆದೇಶ ಉಲ್ಲಂಘನೆಯಾದಾಗ ಇಂಥ ಘಟನೆಗಳು ನಡೆಯುತ್ತವೆ’ ಎಂದು ಎನ್. ಎಂ. ಸುರೇಶ್ ಹೇಳಿದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಎಲ್ಲ ಕಲಾವಿದರ ಪರವಾಗಿ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ನಿಲುವು ವ್ಯಕ್ತಪಡಿಸುತ್ತಿದೆ. ಜತೆಗೆ ಬಂಧನಕ್ಕೆ ಒಳಗಾದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.