ಪುಣೆ: ಪ್ರೊ ಕಬಡ್ಡಿ 7ನೇ ಆವೃತ್ತಿ ಪುಣೆ ಚರಣದ ಸೋಮವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ 38-32 ಅಂಕಗಳ ಅಂತರದಿಂದ ಜೈಪುರ್ ಪಿಂಕ್ ಪ್ಯಾಂಥರ್ ತಂಡವನ್ನು ಪರಾಭವಗೊಳಿಸಿದೆ.
ಇದರೊಂದಿಗೆ ಯೋಧಾ ಕೂಟದಲ್ಲಿ ಸತತ 5ನೇ ಗೆಲುವು ದಾಖಲಿಸಿತು. ಮತ್ತೂಮ್ಮೆ ಹೀನಾಯ ಪ್ರದರ್ಶನ ನೀಡಿದ ಜೈಪುರ್ ಸತತ 6ನೇ ಮುಖಭಂಗ ಅನುಭವಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿಯ ಪಾರುಪತ್ಯ ಮುಂದುವರಿಯಿತು. ಅದು ತೆಲುಗು ಟೈಟಾನ್ಸ್‌ಗೆ 37-29 ಅಂತರದ ಸೋಲುಣಿಸಿತು. ಇದರೊಂದಿಗೆ 13ನೇ ವಿಜಯೋತ್ಸವ ಆಚರಿಸಿದ ಡೆಲ್ಲಿ ತನ್ನ ಅಂಕವನ್ನು 69ಕ್ಕೆ ವಿಸ್ತರಿಸಿತು.
ಯೋಧಾ ತ್ರಿವಳಿ ದಾಳಿ
ಒಗ್ಗಟ್ಟಿನ ಆಟವಾಡಿದ ಯೋಧಾ ಮೊದಲ ಅವಧಿ ಯಿಂದಲೇ ಅಬ್ಬರಿಸತೊಡಗಿತು. ಜೈಪುರ್ ತತ್ತರಿಸಿತು. ಮೊದಲ ಅವಧಿಯಲ್ಲಿ ರೈಡಿಂಗ್‌ನಲ್ಲಿ ದೀಪಕ್ ನರ್ವಾಲ್ ಒಂದಷ್ಟು ಗಮನ ಸೆಳೆದದ್ದು ಬಿಟ್ಟರೆ ಜೈಪುರದ ಉಳಿದ ಆಟಗಾರರೆಲ್ಲ ವಿಫಲರಾದರು. ಅದರಲ್ಲೂ ರಕ್ಷಣಾ ವಿಭಾಗದಲ್ಲಿ ಸಂದೀಪ್ ಧುಲ್ಗೆ ಟ್ಯಾಕಲ್ ನಡೆಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಯುಪಿ ರೈಡರ್ ಅಂಕಗಳನ್ನು ಬಾಚುತ್ತಲೇ ಸಾಗಿದರು. ಶ್ರೀಕಾಂತ್ ಜಾಧವ್ (9 ರೈಡಿಂಗ್ ಅಂಕ), ರಿಷಾಂಕ್ ದೇವಾಡಿಗ (8 ರೈಡಿಂಗ್ ಅಂಕ), ಸುರೇಂದ್ರ ಗಿಲ್ (7 ರೈಡಿಂಗ್ ಅಂಕ) ಆವರ ತ್ರಿವಳಿ ದಾಳಿಯಿಂದಾಗಿ ಯುಪಿ ಯೋಧಾ ನಿಚ್ಚಳ ಮೇಲುಗೈ ಸಾಧಿಸಿತು.
ಹೂಡಾ ಏಕಾಂಗಿ ಹೋರಾಟ
ಒಬ್ಬ ಆಟಗಾರನನ್ನೇ ಹೆಚ್ಚು ಅವಲಂಬಿಸುತ್ತಿರುವುದು ಜೈಪುರದ ಹಿನ್ನಡೆಗೆ ಪ್ರಮುಖ ಕಾರಣ. ರೈಡಿಂಗ್‌ನಲ್ಲಿ ದೀಪಕ್ ಹೂಡಾ ಬಿಟ್ಟರೆ ಬೇರ್ಯಾರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಈ ಪಂದ್ಯದಲ್ಲಿ ದೀಪಕ್ 13 ಅಂಕ ತಂದರು.