ಬೆಂಗಳೂರು: ಪ್ರೊ ಕಬಡ್ಡಿ ಕೂಟದ ಅಗ್ರಸ್ಥಾನಿ ಪಾಟ್ನಾ ಪೈರೇಟ್ಸ್ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಸೋಮವಾರದ ಮೊದಲ ಪಂದ್ಯದಲ್ಲಿ ಅದು ಅಂಕ ಪಟ್ಟಿಯ ಕಡೆಯ ಸ್ಥಾನಿ ತೆಲುಗು ಟೈಟಾನ್ಸ್ ತಂಡವನ್ನು 38-30 ಅಂಕಗಳಿಂದ ಉರುಳಿಸಿ 14ನೇ ಗೆಲುವು ದಾಖಲಿಸಿತು.
ಇನ್ನೊಂದೆಡೆ ಟೈಟಾನ್ಸ್ 15ನೇ ಸೋಲಿಗೆ ತುತ್ತಾಯಿತು. ಅದು 20 ಪಂದ್ಯಗಳಲ್ಲಿ ಗೆದ್ದದ್ದು ಒಂದರಲ್ಲಿ ಮಾತ್ರ.
ರೈಡರ್ ಸಚಿನ್ (14 ಅಂಕ), ಆಲ್ರೌಂಡರ್ ಮೊಹಮ್ಮದ್ ರೇಝ (5 ಅಂಕ), ಗುಮಾನ್ ಸಿಂಗ್ (4 ಅಂಕ) ಪಾಟ್ನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೈಟಾನ್ಸ್ ಪರ ರಜನೀಶ್ 10, ಅಂಕಿತ್ ಬೇನಿವಾಲ್ 7 ಅಂಕ ಗಳಿಸಿದರು.
ಯೋಧ ವಿಜಯ
ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧ 44-28 ಅಂತರದಿಂದ ದಬಾಂಗ್ ದಿಲ್ಲಿಯನ್ನು ಮಣಿಸಿತು. ಇದು 21 ಪಂದ್ಯಗಳಲ್ಲಿ ಯೋಧರಿಗೆ ಒಲಿದ 9ನೇ ಗೆಲುವು.
ರೈಡರ್ ಪ್ರದೀಪ್ ನರ್ವಾಲ್ ಅವರ ಪ್ರಚಂಡ ಆಟ ಯೋಧ ತಂಡದ ಆಕರ್ಷಣೆಯಾಗಿತ್ತು. ಅವರು 21 ರೈಡ್ ನಡೆಸಿ 14 ಅಂಕ ಗಳಿಸಿದರು. ಇನ್ನೋರ್ವ ರೈಡರ್ ಸುರೇಂದರ್ ಗಿಲ್ 6 ಅಂಕ ಗಳಿಸಿದರು. ದಿಲ್ಲಿ ಪರ ಮಿಂಚಿದವರೆಂದರೆ ಆಲ್ರೌಂಡರ್ ವಿಜಯ್ (8) ಮತ್ತು ಬದಲಿ ರೈಡರ್ ಆಗಿ ಬಂದ ಮಂಜೀತ್ (7) ಮಾತ್ರ.