ಮುಂಬಯಿ: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಶನಿವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ 50-30 ಅಂಕಗಳಿಂದ ಬೆಂಗಾಲ್ ವಾರಿಯರ್ ತಂಡವನ್ನು ಸೋಲಿಸಿದೆ.
ಇದರೊಂದಿಗೆ ಪಾಟ್ನಾ ಪೈರೇಟ್ಸ್ “ಬಿ’ ಗುಂಪಿನಲ್ಲಿ ತನ್ನ ಸ್ಥಿತಿಯನ್ನು ಇನ್ನಷ್ಟು ಉತ್ತಪಡಿಸಿಕೊಂಡಿದೆ. ಬೆಂಗಾಲ್ ವಾರಿಯರ್ ಸೋತರೂ ಮುಂದಿನ ಪಂದ್ಯಗಳನ್ನು ಸತತವಾಗಿ ಗೆದ್ದರೆ ನಾಕೌಟ್ ಹಂತಕ್ಕೇರುವ ಅವಕಾಶ ಗಳಿಸಲಿದೆ.
ಆತಿಥೇಯ ಯು ಮುಂಬಾ ಮತ್ತು ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡಗಳ ನಡುವಿನ ದ್ವಿತೀಯ ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತು. ಯಾರೂ ಗೆಲ್ಲಬಹುದಾದ ಸ್ಥಿತಿ ನಿರ್ಮಾಣವಾಗುತ್ತ ಹೋಯಿತು. ಅಂತಿಮವಾಗಿ ಗುಜರಾತ್ 38-36 ಅಂಕಗಳಿಂದ ಮುಂಬಾಗೆ ಸೋಲುಣಿಸಿತು.
ಪಾಟ್ನಾ ಪೂರ್ಣ ಸಾಮರ್ಥ್ಯ
ಪಾಟ್ನಾ ಪೈರೇಟ್ಸ್ ಬಹಳ ಸಮಯದ ಬಳಿಕ ತನ್ನ ಪೂರ್ಣ ಸಾಮರ್ಥ್ಯವನ್ನು ತೋರಿ ಎದುರಾಳಿಯನ್ನು ಹೊಸಕಿ ಹಾಕಿತು. ಕೆಲವು ಪ್ರಮುಖ ಆಟಗಾರರು ಈ ಬಾರಿ ಬೇರೆ ಫ್ರಾಂಚೈಸಿಗಳಿಗೆ ವಲಸೆ ಹೋಗಿದ್ದರಿಂದ ಪಾಟ್ನಾ ತುಸು ದುರ್ಬಲವಾಗಿತ್ತು. ಈ ಸಮಸ್ಯೆಗಳನ್ನೆಲ್ಲ ಶನಿವಾರದ ಪಂದ್ಯದಲ್ಲಿ ಪಾಟ್ನಾ ನಿವಾರಿಸಿಕೊಂಡಿತು.
ಪಾಟ್ನಾ ಪರ ದೀಪಕ್ ನರ್ವಾಲ್ ದಾಳಿಯಲ್ಲಿ 12 ಅಂಕ, ಪ್ರದೀಪ್ ನರ್ವಾಲ್ 11 ಅಂಕ ತಂದರು. ಇದರ ಪರಿಣಾಮ ಪಾಟ್ನಾ ಪ್ರಬಲ ಸ್ಥಿತಿಗೆ ತಲುಪಿತು. ಇದೇ ವೇಳೆ ರಕ್ಷಣೆಯಲ್ಲೂ ಹಿಡಿತ ಸಾಧಿಸಿತು. ಜೈದೀಪ್ ಎದುರಾಳಿ ಆಟಗಾರರನ್ನು ತಮ್ಮ ಕೋಟೆಯಲ್ಲಿ ಕೆಡವಿಕೊಂಡು 5 ಅಂಕ ಸಂಪಾದಿಸಿದರು.ಇದಕ್ಕೆ ಪ್ರತಿಯಾಗಿ ಬೆಂಗಾಲ್ ವೈಫಲ್ಯ ಅನುಭವಿಸುತ್ತ ಹೋಯಿತು. ಸೋಲಿನ ಅಂತರ ಹೆಚ್ಚತೊಡಗಿತು. ಈವರೆಗಿನ ಪ್ರೊ ಕಬಡ್ಡಿ ಕೂಟಗಳಲ್ಲಿ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡದ ಬೆಂಗಾಲ್‌ನಿಂದ ಈ ಬಾರಿ ಅಭಿಮಾನಿಗಳು ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ. ಆದರೆ ಈ ನಿರೀಕ್ಷೆಗೆ ತಕ್ಕಂತೆ ಆಟಗಾರರು ಆಡದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ಇದುವರೆಗೆ ಒಟ್ಟು 11 ಪಂದ್ಯವಾಡಿರುವ ಪಾಟ್ನಾ 5 ಜಯ, 6 ಸೋಲನುಭವಿಸಿದೆ. ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ 9 ಪಂದ್ಯಗಳನ್ನಾಡಿದ್ದು 4 ಗೆದ್ದು, 3 ಸೋತಿದೆ. ಇನ್ನೆರಡು ಪಂದ್ಯ ಟೈಗೊಂಡಿದೆ.