ಸುಮಾರು 4,000 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಭಾರತೀಯ ಕ್ರೀಡೆ ಕಬಡ್ಡಿ. ಭಾರತೀಯರುಕ್ರಿಕೆಟ್ ಅನಂತರ ಅತೀ ಹೆಚ್ಚು ವೀಕ್ಷಿಸುವ ಕ್ರೀಡೆ. ಈ ದೇಶಿ ಕ್ರೀಡೆಗೆ 90ರ ದಶಕದಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕು ಪ್ರಚಲಿತಕ್ಕೆ ಬಂತಾದರೂ, ಅತೀ ಹೆಚ್ಚು ಸದ್ದು ಮಾಡಿತ್ತಿರುವುದು ಪ್ರೋ ಕಬಡ್ಡಿ ಲೀಗ್ ಮೂಲಕ.
ಐಪಿಎಲ್ ಮಾದರಿಯಲ್ಲಿ ಕಬಡ್ಡಿ ಲೀಗ್ ಆರಂಭಿಸಲು ಯೋಚಿಸುವಾಗ ಇದರ ಯಶಸ್ಸಿನ ಬಗ್ಗೆ ಆಯೋಜಕರಿಗೂ ಅನುಮಾನವಿತ್ತು. ಆದರೆ ಇವರೆಲ್ಲರ ನಿರೀಕ್ಷೆಗೂ ಮೀರಿ ಪ್ರೊ ಕಬಡ್ಡಿ ಯಶಸ್ಸು ಸಾಧಿಸಿ, ಗ್ರಾಮೀಣ ಮಟ್ಟದ ಮನೆ ಮನ ತಲುಪಿತು.
ಮೊದಲ ಸೀಸನ್ ನಲ್ಲಿಯೇ ಸಾಕಷ್ಟು ಯಶಸ್ಸು ಕಂಡು ಪ್ರತಿಯೊಬ್ಬ ಆಟಗಾರನು ಮನೆಮಾತಾದರು. ಜೈಪುರ ಪಿಂಕ್ ಪ್ಯಾಂಥರ್ಸ್ ಚೊಚ್ಚಲ ಆವೃತ್ತಿಗೆದ್ದು ಬೀಗಿದರು.ಅಲ್ಲಿಂದ ಶುರುವಾದ ಪಿಕೆಎಲ್ ಪಯಣ ಸದ್ಯಕ್ಕೆ 10ನೇ ಆವೃತ್ತಿ¤ಯತ್ತ ಬಂದು ನಿಂತಿದೆ. ಈ ಹತ್ತು ಆವೃತ್ತಿಗಳಲ್ಲಿ ಎಲೆಮರೆಕಾಯಿಯಂತಿದ್ದ ಅದೆಷ್ಟೋ ಪ್ರತಿಭೆಗಳನ್ನು ದೇಶದ ಮೂಲೆ ಮೂಲೆಗಳಿಂದ ಆಯ್ದು ತಂದು ತಮ್ಮ ಪ್ರತಿಭೆ ಅನಾವರಣಗೊಳಿಸಲು ಒಂದು ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆ.
ಅದೆಷ್ಟೋ ಜನರ ಬದುಕು ಬದಲಿಸಿದೆ. ದೇಶಕ್ಕೆ ಪ್ರದೀಪ್ ನರ್ವಾಲ್ , ಪವನ್ ಶೆರಾವತ್, ಸುರ್ಜಿತ್ ಸಿಂಗ್, ರೋಹಿತ್ ಕುಮಾರ್, ರಾಹುಲ್ ಚೌಧರಿ, ಸೌರಭ್ ನಂದಾಲ್, ನವೀನ್ ಕುಮಾರ್ ರಂತಹ ಶ್ರೇಷ್ಠ ಆಟಗಾರರನ್ನು ಪರಿಚಯಿಸಿದೆ.
ಪ್ರೊ ಕಬಡ್ಡಿ ಲೀಗ್ ಎಂಬ ಒಂದು ವೇದಿಕೆ ಸಾವಿರಾರು ದೇಶಿ ಪ್ರತಿಭೆಗಳ ಕನಸಿಗೆ ನೀರುಣಿಸುವ ಕಾರ್ಯ ಮಾಡುತ್ತಿದೆ. ಈ ಕ್ರೀಡೆಗೆ ಬೆಲೆಯಿಲ್ಲ, ಈ ಕ್ರೀಡೆಗೆ ಭವಿಷ್ಯವಿಲ್ಲ ಎನ್ನುತ್ತಿದ್ದಂತಹ ಅದೆಷ್ಟೋ ಕೊಂಕು ಮಾತುಗಳಿಗೆ ಏಷ್ಯನ್ ಗೇಮ್ಸ್, ಕಬಡ್ಡಿ ವಿಶ್ವಕಪ್ ನಂತಹ ದೊಡ್ಡ ಮಟ್ಟದ ವೇದಿಕೆಗಳಲ್ಲಿ ಭಾರತ ಪ್ರತಿನಿಧಿಸಿ ಬಂಗಾರ ಗೆದ್ದು ತಂದು ಉತ್ತರ ಕೊಡಲಾಗುತ್ತದೆ.
ಅನೂಪ್ ಕುಮಾರ್, ಧರ್ಮರಾಜ್ ಚೇರಲಾತನ್, ಮಂಜೀತ್ ಛಿಲ್ಲರ್, ಜಶ್ವೀರ್ ಸಿಂಗ್ ರಂತಹ ಹಿರಿಯ ಆಟಗಾರರು ಕಬಡ್ಡಿಯಲ್ಲೂ ಬದುಕಿದೆ ಎಂಬುದನ್ನು ನಿರೂಪಿಸಿದ್ದಾರೆ. ಇನ್ನೂ ನಮ್ಮ ಹೆಮ್ಮೆಯ ಕನ್ನಡತಿ, ಭಾರತ ತಂಡದ ಮಾಜಿ ನಾಯಕಿ ಮಮತಾ ಪೂಜಾರಿ ಕಬಡ್ಡಿ ಬರೀ ಪುರುಷರ ಕ್ರೀಡೆಯಲ್ಲ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.
ಹೀಗೆ ಪ್ರೊ ಕಬಡ್ಡಿ ಲೀಗ್ ಎಂಬ ಒಂದು ವೇದಿಕೆಯಿಂದ ಗ್ರಾಮೀಣ ಕ್ರೀಡೆ ಕಬಡ್ಡಿಗೆ ಮರುಜೀವ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಖೋ ಖೋ ಸೇರಿದಂತೆ ಇನ್ನೂ ಹಲವು ದೇಶಿ ಕ್ರೀಡೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳಾಗಲೀ ಎಂದು ಆಶಿಸುವೆ.
-ಹಣಮಂತ ಎಂ.ಕೆ.
ತುಮಕೂರು