Advertisement

ಪ್ರೊ ಕಬಡ್ಡಿ: 2 ವರ್ಷಗಳ ಬಳಿಕ ಬೆಂಗಳೂರು ಚರಣ

10:26 AM Sep 01, 2019 | sudhir |

ಬೆಂಗಳೂರು: ಪ್ರೊ ಕಬಡ್ಡಿ 7ನೇ ಆವೃತ್ತಿ ಬೆಂಗಳೂರು ಚರಣದ ಸ್ಪರ್ಧೆ ಶನಿವಾರದಿಂದ “ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ’ದಲ್ಲಿ ಆರಂಭವಾಗಲಿದೆ. 2 ವರ್ಷಗಳ ಬಳಿಕ ಬೆಂಗಳೂರಿಗೆ ಕೂಟದ ಆತಿಥ್ಯ ಲಭಿಸಿರುವುದು ವಿಶೇಷ.

Advertisement

ಸಂಜೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡವನ್ನು ಎದುರಿಸಲಿದೆ. 2ನೇ ಪಂದ್ಯದಲ್ಲಿ ಯು ಮುಂಬಾ ತಂಡ ಬಲಿಷ್ಠ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಸೆಣಸಲಿದೆ.

ವಿಶ್ವಾಸದಲ್ಲಿ ಹಾಲಿ ಚಾಂಪಿಯನ್ಸ್‌
ರೋಹಿತ್‌ ಕುಮಾರ್‌ ನೇತೃತ್ವದ ಬೆಂಗಳೂರು ತಂಡ ಹಾಲಿ ಚಾಂಪಿಯನ್ಸ್‌ ಖ್ಯಾತಿಯೊಂದಿಗೆ ತವರಿನ ಚರಣ ಆರಂಭಿಸಲು ತುದಿಗಾಲಲ್ಲಿ ನಿಂತಿದೆ. ಅದರಲ್ಲೂ ಹೊಸದಿಲ್ಲಿ ಚರಣದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಬುಲ್ಸ್‌ 41-30 ಅಂಕಗಳ ಅಂತರದಿಂದ ಜೈಪುರ್‌ ವಿರುದ್ಧ ಗೆಲುವು ಸಾಧಿಸಿರುವ ಆತ್ಮವಿಶ್ವಾಸದಲ್ಲಿದೆ.

ಪವನ್‌ ಸೆಹ್ರಾವತ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ರೋಹಿತ್‌ ಕುಮಾರ್‌ ನಾಯಕನ ಆಟ ಆಡುತ್ತಿದ್ದಾರೆ. ಮಹೇಂದರ್‌ ಸಿಂಗ್‌ ಹಾಗೂ ಮೋಹಿತ್‌ ಸೆಹ್ರಾವತ್‌ ಟ್ಯಾಕಲ್‌ ಮೂಲಕ ಗಮನ ಸೆಳೆದಿದ್ದಾರೆ.

ಬೆಂಗಳೂರು ತಂಡ ಇದುವರೆಗೆ ಒಟ್ಟು 11 ಪಂದ್ಯ ಆಡಿದೆ. ಆರನ್ನು ಗೆದ್ದು, ಐದರಲ್ಲಿ ಸೋಲನುಭವಿಸಿದೆ. 33 ಅಂಕಗಳೊಂದಿಗೆ 5ನೇ ಸ್ಥಾನಿಯಾಗಿದೆ.

Advertisement

2 ವರ್ಷಗಳ ಬಳಿಕ ಸಂಭ್ರಮ
ಪ್ರೊ ಕಬಡ್ಡಿ ಪಂದ್ಯಾವಳಿಯ ಕಳೆದೆರಡು ಆವೃತ್ತಿಗಳ ಬೆಂಗಳೂರಿನ ಪಂದ್ಯಗಳನ್ನು ಬೇರೆ ರಾಜ್ಯದಲ್ಲಿ ಆಡಲಾಗಿತ್ತು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಕಬಡ್ಡಿ ಕೂಟ ಆಯೋಜಿಸಲು ಬುಲ್ಸ್‌ಗೆ ಅವಕಾಶ ನೀಡಿರಲಿಲ್ಲ. ಅಂದು ಸಾಕಷ್ಟು ಪ್ರಯತ್ನದ ಬಳಿಕವೂ ಬೆಂಗಳೂರು ಬುಲ್ಸ್‌ ಫ್ರಾಂಚೈಸಿ ಸುಮ್ಮನಾಗಿತ್ತು. ಆದರೆ ಈ ಸಲ ಕ್ರೀಡಾ ಇಲಾಖೆ ಮನವೊಲಿಸಲು ಯಶಸ್ವಿಯಾಗಿದೆ. ಇದರಿಂದ ತವರಿನ ಕಬಡ್ಡಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next