Advertisement

ಅಜಯ್‌ ರೈಡಿಂಗ್‌ ಸಾಹಸ ತಲೈವಾಸ್‌ಗೆ 35-34 ಅಂತರದ ರೋಚಕ ಜಯ

11:58 AM Sep 27, 2017 | Team Udayavani |

ಹೊಸದಿಲ್ಲಿ: ಅಜಯ್‌ ಠಾಕೂರ್‌ ಅವರ ಮತ್ತೂಂದು ಸಾಹಸಮಯ ರೈಡಿಂಗ್‌ ಪ್ರದರ್ಶನದಿಂದ (13 ಅಂಕ) ಬಲಿಷ್ಠ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ವಿರುದ್ಧ ತಮಿಳ್‌ ತಲೈವಾಸ್‌ 35-34 ಅಂತರದ ರೋಚಕ ಜಯ ಸಾಧಿಸಿದೆ. ಮಂಗಳವಾರದ ಮತ್ತೂಂದು ಕೌತುಕಭರಿತ ಪ್ರೊ ಕಬಡ್ಡಿ  ಪಂದ್ಯದಲ್ಲಿ ಪಾಟ್ನಾ 36-34 ಅಂಕಗಳಿಂದ ಡೆಲ್ಲಿಗೆ ಸೋಲುಣಿಸಿದೆ.

Advertisement

ಗುಜರಾತ್‌-ತಲೈವಾಸ್‌ ನಡುವಿನ ಮಂಗಳ ವಾರದ ಪಂದ್ಯ ಪ್ರೇಕ್ಷಕರನ್ನು ಕುಳಿತಲ್ಲಿಂದ ಎದ್ದು ನಿಲ್ಲಿಸಿತು. ಇದಕ್ಕೆಲ್ಲ ಕಾರಣ ಅಜಯ್‌ ಅವರ ಮತ್ತೂಂದು ಸಾಹಸಮಯ ರೈಡಿಂಗ್‌. ಈ ಹಿಂದೆ ಎರಡು ಸಲ ಇದೇ ರೀತಿಯ ಪ್ರಚಂಡ ಆಟ ಪ್ರದರ್ಶಿಸಿದ್ದ ತಲೈವಾಸ್‌ ನಾಯಕ ಅಜಯ್‌ ಮತ್ತೆ ಮಿಂಚಿದರು. ಸತತ 2ನೇ ಬಾರಿಗೆ ಅವರಿಂದ ಇಂಥದೊಂದು ಪ್ರದರ್ಶನ ಹೊರಹೊಮ್ಮಿದೆ. ಕೊನೆಯ ಹಂತದವರೆಗೆ ಗೆಲುವಿನ ಕನಸು ಕಾಣುತ್ತಿದ್ದ ಗುಜರಾತ್‌ ತಂಡವನ್ನು ಅಜಯ್‌ ಕೊನೆಯ 30 ಸೆಕೆಂಡ್ಸ್‌ನಲ್ಲಿ ನುಚ್ಚುನೂರು ಮಾಡಿದರು. ಅವರು ಕೊನೆಯದಲ್ಲಿ ಭರ್ಜರಿ ರೈಡಿಂಗ್‌ ನಡೆಸಿ 3 ಅಂಕವನ್ನು ತಂದು ತಂಡಕ್ಕೆ ಸತತ 2ನೇ ರೋಚಕ ಗೆಲುವು ತಂದರು. ಭಾರೀ ಆಘಾತಕ್ಕೆ ಒಳಗಾದ ಗುಜರಾತ್‌ ಸಪ್ಪೆ ಯಾಯಿತು. ಗುಜರಾತ್‌ ಪರ ಸಚಿನ್‌ (11 ಅಂಕ) ರೈಡಿಂಗ್‌ನಲ್ಲಿ ಮಿಂಚಿದ್ದು ವ್ಯರ್ಥವಾಯಿತು.

ತಲೈವಾಸ್‌ ಚುರುಕಿನ ಆಟ
ಕೊನೆ ಒಂದು ನಿಮಿಷ ಇದ್ದಾಗ 34-30ರಲ್ಲಿ ಇದ್ದ ಗುಜರಾತ್‌ ತಂಡವನ್ನು ಮೊದಲ ಸಲ ತಲೈವಾಸ್‌ ಆಲೌಟ್‌ ಮಾಡಿತು. ಇದರಿಂದ ತಲೈವಾಸ್‌ ಅಂಕ 32ಕ್ಕೆ ಏರಿತು. ಟೈ ಮಾಡಿಕೊಳ್ಳಲು 2 ಅಂಕ ಸಾಕಿತ್ತು. ಗೆಲ್ಲಲು 3 ಅಂಕ ತಲೈವಾಸ್‌ಗೆ ಬೇಕಿತ್ತು. ಅಜಯ್‌ ದಾಳಿಗಿಳಿದರು. ಅಭಿಮಾನಿಗಳ ನಿರೀಕ್ಷೆ ಹೆಚ್ಚಾಯಿತು. ಬಾಕಿ ಇದ್ದಿದ್ದು ಕೊನೆ 30 ಸೆಕೆಂಡ್ಸ್‌ ಮಾತ್ರ. ಹೌದು, ಇಲ್ಲಿ ಮತ್ತೂಮ್ಮೆ ಅಜಯ್‌ ಮಿಂಚಿದರು. ಕೊನೆಯಲ್ಲಿ 3 ಅಂಕವನ್ನು ತಂದರು. ಕೈತಪ್ಪಿ ಹೋಗುತ್ತಿದ್ದ ಪಂದ್ಯ ವನ್ನು ತಲೈವಾಸ್‌ ಪಾಲಾಗುವಂತೆ ಮಾಡಿದರು. 

ರವಿವಾರ ನಡೆದಿದ್ದ ಬೆಂಗಾಲ್‌ ವಿರುದ್ಧದ ಪಂದ್ಯ ದಲ್ಲಿ ಕೊನೆಯ 6 ಸೆಕೆಂಡ್ಸ್‌ ಇದ್ದಾಗ ಇದೇ ರೀತಿಯ ಮಿಂಚಿನ  ರೈಡಿಂಗ್‌ನಲ್ಲಿ ಅಜಯ್‌ ಗೆಲುವಿನ ರೂವಾರಿಯಾಗಿದ್ದರು. ಹರ್ಯಾಣ ಚರಣದ ವೇಳೆ ಯುಪಿ ಯೋಧಾ ತಂಡಕ್ಕೂ ಇದೇ ರೀತಿಯಲ್ಲಿ ಅಜಯ್‌ ಶಾಕ್‌ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೆಲುವಿನತ್ತ ಸಾಗಿದ್ದ ಗುಜರಾತ್‌
ಮೊದಲ ಅವಧಿಯ ಹಿನ್ನಡೆಯೊಂದಿಗೆ ಆಟ ಆರಂಭಿಸಿದ ತಮಿಳ್‌ ತಲೈವಾಸ್‌ ದ್ವಿತಿಯಾರ್ಧದ 5ನೇ ನಿಮಿಷಕ್ಕೆ 2ನೇ ಸಲ ಆಲೌಟ್‌ ಆಯಿತು. ಆಗ 27-15ರಿಂದ ತಮಿಳ್‌ ತಲೈವಾಸ್‌ ಹಿನ್ನಡೆಯಲ್ಲಿತ್ತು. 

Advertisement

ಪಂದ್ಯ ಪೂರ್ತಿಗೊಳ್ಳಲು ಕೊನೆಯ 4 ನಿಮಿಷ ಇದ್ದಾಗ ಗುಜರಾತ್‌ 34-24 ಅಂತರದಿಂದ ಮುನ್ನಡೆದು ಗೆಲುವಿನತ್ತ ಸಾಗಿತ್ತು. 
ಮೊದಲ ಅವಧಿ ಮುಕ್ತಾಯಕ್ಕೆ ಗುಜರಾತ್‌ 20-13ರಿಂದ ಮುಂದಿತ್ತು. ಈ ಅವಧಿಯ 11ನೇ ನಿಮಿಷದಲ್ಲಿ ಮೊದಲ ಸಲ ತಮಿಳ್‌ ತಲೈವಾಸ್‌ ತಂಡವನ್ನು ಗುಜರಾತ್‌ ಆಲೌಟ್‌ ಮಾಡಿತು. ಸಚಿನ್‌ ಮಿಂಚಿನ ದಾಳಿ ನಡೆಸಿದರು. ತಲೈವಾಸ್‌ ಕೋಟೆಯೊಳಗೆ ನುಗ್ಗಿ ಅಂಕವನ್ನು ತೆಗೆದರು. ಈ ವೇಳೆ ತಲೈವಾಸ್‌ ಆಟಗಾರರು ನಿರುತ್ತರರಾಗಿದ್ದರು. ಅಜಯ್‌ ಹಲವು ಬಾರಿ ರೈಡಿಂಗ್‌ನಲ್ಲಿ ವಿಫ‌ಲರಾದರು. ಪ್ರಪಂಚನ್‌ ಸ್ವಲ್ಪ ರೈಡಿಂಗ್‌ ಅಂಕ ತಂದಿತ್ತಿದ್ದರು. 

ಡೆಲ್ಲಿಗೆ ಸತತ 6ನೇ ಸೋಲು
ದಬಾಂಗ್‌ ಡೆಲ್ಲಿ ಪ್ರೊ ಕಬಡ್ಡಿ ಕೂಟದಲ್ಲಿ ಸತತ 6ನೇ ಸೋಲು ಅನುಭವಿಸಿತು. ಮಂಗಳವಾರ ನಡೆದ 2ನೇ ಪಂದ್ಯದಲ್ಲಿ ಡೆಲ್ಲಿ ತಂಡ ಪಾಟ್ನಾ ಪೈರೇಟ್ಸ್‌ ವಿರುದ್ಧ 36-34 ಅಂತರದ ಸೋಲು ಅನುಭವಿಸಿತು. ಇದು ಆತಿಥೇಯ ತಂಡಕ್ಕೆ ತವರಿನಲ್ಲಿ ಎದುರಾದ ಸತತ 4ನೇ ಸೋಲಾಗಿದೆ.

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next