Advertisement

ಪ್ರೊ|ಡಾ|ಎಂ.ಪಿ. ಪೈ ವಿಶೇಷ ಅಂಚೆ ಕವರ್‌ ಬಿಡುಗಡೆ

09:22 AM Apr 11, 2018 | Harsha Rao |

ಮಂಗಳೂರು: ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಅಭಿವೃದ್ಧಿಯ ರೂವಾರಿ ಡಾ| ಪ್ರೊ| ಎಂ.ಪಿ. ಪೈ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಕವರನ್ನು ಮಂಗಳವಾರ ನಗರದ ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. 

Advertisement

ಮಂಗಳೂರು ಅಂಚೆ ಕಚೇರಿಗಳ ಸೀನಿಯರ್‌ ಸೂಪರಿಂಟೆಂಡೆಂಟ್‌ ಎಂ. ಜಗದೀಶ್‌ ಪೈ ಅವರು ವಿಶೇಷ ಅಂಚೆ ಕವರನ್ನು ಬಿಡುಗಡೆ ಮಾಡಿದರು. ಮಾಹೆ ವಿಶ್ರಾಂತ ಉಪಕುಲಪತಿ ಡಾ| ಬಿ.ಎಂ. ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.

ಮಂಗಳೂರು ಪಾಂಡುರಂಗ ಪೈ ಅವರು ಡಾ| ಎಂ.ಪಿ. ಪೈ ಎಂದೇ ಪ್ರಸಿದ್ಧರಾಗಿದ್ದರು. ಅವರು ಕರಾವಳಿ ಕಂಡ ಅತ್ಯುತ್ತಮ ತಜ್ಞರಾಗಿದ್ದು, ಅತ್ಯುತ್ತಮ ಮಾನವೀಯ ಗುಣಗಳ ಮೂಲಕವೂ ಜನಮಾತಾಗಿದ್ದರು. ಕೆಎಂಸಿಯಲ್ಲಿ ಜನರಲ್‌ ಸರ್ಜರಿ ವಿಭಾಗದಲ್ಲಿ ಅವರು ಆರಂಭಿಸಿದ್ದ ಸ್ನಾತ ಕೋತ್ತರ ಪದವಿ ವಿಭಾಗವು ಇದುವರೆಗೆ 500ಕ್ಕೂ ಮಿಕ್ಕಿ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರನ್ನು ತಯಾರಿಸಿ ಸಮಾಜಕ್ಕೆ ನೀಡಿದೆ ಎಂದವರು ಹೇಳಿದರು.

ಅನನ್ಯ ಕೊಡುಗೆ
ಮುಖ್ಯ ಅತಿಥಿ ಕೆಎಂಸಿ ಡೀನ್‌ ಡಾ| ಎಂ.ವಿ. ಪ್ರಭು ಮಾತನಾಡಿ, ಲೈಟ್‌ಹೌಸ್‌ ಹಿಲ್‌ ರಸ್ತೆಯ ಬಳಿ ಇರುವ ಬೃಹತ್‌ ಕೆಎಂಸಿ ಕಟ್ಟಡ ಡಾ| ಎಂ.ಪಿ. ಪೈ ಅವರ ಕೊಡುಗೆ. ಸಂಶೋಧನಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅವರು ಈ ಕಟ್ಟಡದ ಮೇಲ್ಭಾಗದ ಮಾಳಿಗೆಯಲ್ಲಿ ಸಂಶೋಧನಾ ಲ್ಯಾಬ್‌ ಆರಂಭಿಸಿದ್ದರು. ಅವರ ಬೋಧನೆ ಮಂಗಳೂರಿಗೆ ಮಾತ್ರ ಸೀಮಿತವಾಗದೆ ಮಣಿ ಪಾಲ ಕೆಎಂಸಿಗೂ ವಿಸ್ತರಿಸಿತ್ತು. ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವ ಘಟಕವನ್ನು ಮಣಿಪಾಲದಲ್ಲಿ ಆರಂಭಿಸಿದ್ದರು. ಕೆಎಂಸಿಯಿಂದ ನಿವೃತ್ತಿ ಹೊಂದಿದ ಬಳಿಕ ಅವರು ಒಮಾನ್‌ಗೆ ತೆರಳಿ ಸಲಾಲಾ ದಲ್ಲಿರುವ ಖಬೂಸ್‌ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್‌ ಸರ್ಜನ್‌ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ ಬದುಕಿನ ಕೊನೆಯ ದಿನಗಳನ್ನು ಅವರು ಮಂಗಳೂರಿನಲ್ಲಿ ಕಳೆದಿದ್ದು, ಈ ಸಂದರ್ಭದಲ್ಲಿ ನಗರ ಮತ್ತು ಸುತ್ತಮುತ್ತಲ ಪರಿಸರದಲ್ಲಿ ಶಸ್ತ್ರ ಚಿಕಿತ್ಸೆ ಸಂಬಂಧಿತ ಸಮಸ್ಯೆಗಳಿಗೆ ಸಲಹೆ ನೀಡಿದ್ದರು. 1992 ಆಗಸ್ಟ್‌ 27 ರಂದು ಅವರು ನಿಧನರಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಶ್ಲಾಘನೀಯ ಎಂದರು.

ಅಂಚೆ ಕಚೇರಿಯ ಸೀನಿಯರ್‌ ಪೋಸ್ಟ್‌ ಮಾಸ್ಟರ್‌ ಎಲ್‌.ಪ್ರಕಾಶ್‌ ಉಪಸ್ಥಿತರಿದ್ದರು. ಕೆಎಂಸಿ ಮೂತ್ರಾಂಗ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಿ.ಜಿ. ಲಕ್ಷ್ಮಣ ಪ್ರಭು ಪ್ರಸ್ತಾವನೆ ಗೈದರು. ದಿನೇಶ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next