ಮಂಡ್ಯ: ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರವೇ ಬರುವ ವಾತಾವರಣ ಶುರುವಾಗುತ್ತಿದೆ. ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕನಕಭವನದ ಆವರಣದಲ್ಲಿ ನಿರ್ಮಿಸಿರುವ ವರಸಿದ್ಧಿ ಶ್ರೀ ವಿನಾಯಕ ದೇವಾಲಯ ಲೋಕಾರ್ಪಣೆ ಮಾಡಿ ಮಾತನಾಡಿದರು.
ಹಾನಗಲ್‌ನಲ್ಲಿ ದಲಿತ ಎಡಗೈನವರ ಕಾರ್ಯಕ್ರಮವಿತ್ತು. ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದವರ ಪಕ್ಷಕ್ಕೆ ಹಲವರು ಹೋಗುತ್ತಿದ್ದಾರೆ ಎಂದು ನಾನು ಭಾಷಣ ಮಾಡಿದ್ದೆ. ಆದರೆ ಬಿಜೆಪಿಯವರು ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ. ಇದನ್ನೇ ಕೆಟ್ಟದ್ದಾಗಿ ಹೇಳಿಕೊಂಡು ನನ್ನ ವಿರುದ್ಧ ಹೋರಾಟ ಮಾಡಿದ್ದಾರೆ. ಹೀಗಾಗಿ ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಕಿಡಿಕಾರಿದರು.
ಇದನ್ನೂ ಓದಿ:ನ.29ರಿಂದ ಡಿ.23ರವರೆಗೆ ಸಂಸತ್‌ನ ಚಳಿಗಾಲದ ಅಧಿವೇಶನ?
ನಾನು ಸುಟ್ಟೋಗಲ್ಲ: ನನ್ನ ಫ್ಲೆಕ್ಸ್ ಸುಟ್ಟಿದ ತಕ್ಷಣ ನಾನು ಸುಟ್ಟೋಗಲ್ಲ. ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟೋಗಲ್ಲ. ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು. ಬಹಳ ಜನ ಬುದ್ಧಿ ಹೀನರು ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಈ ಸಮಾಜಕ್ಕೆ ಏನು ಕೊಟ್ಟ ಅಂತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವ, ಶ್ರೀಮಂತ ಇಲ್ಲ. ಎಲ್ಲ ಜಾತಿಯಲ್ಲೂ ಬಡವರಿದ್ದಾರೆ. ಹೀಗಾಗಿ ಎಲ್ಲ ಜಾತಿಯ ಬಡವರ ಅಭಿವೃದ್ಧಿ ಆಗಬೇಕು. ನಾನು ಕೊಟ್ಟ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ. ಅವಕಾಶದಿಂದ ವಂಚಿತರಾದವರ ಪರ ನಾನು ಕೆಲಸ ಮಾಡಿದ್ದೇನೆ. ಆದರೂ ಸಿದ್ದರಾಮಯ್ಯ ಜಾತಿ ಮಾಡುತ್ತಾನೆ ಅಂತಾರೆ ಎಂದರು.