Advertisement

ಗೋವಿಂದ ಪೈ ಪ್ರಶಸ್ತಿ ಪ್ರೊ|ಎ. ಸುಂದರ ಆಯ್ಕೆ

11:24 PM Sep 10, 2020 | mahesh |

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಪ್ರೊ| ಎ. ಸುಂದರ ಅವರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸೆಪ್ಟಂಬರ್‌ 12ರಂದು ಶಿವಮೊಗ್ಗದ ಲ್ಲಿರುವ ಅವರ ನಿವಾಸದಲ್ಲಿ ನಡೆಯಲಿದೆ. ಮಣಿಪಾಲ ಗ್ಲೋಬಲ್‌ನ ಮುಖ್ಯಸ್ಥ ಟಿ.ವಿ. ಮೋಹನದಾಸ್‌ ಪೈ ಅವರು ತಮ್ಮ ತಾಯಿ ವಿಮಲಾ ಪೈ ಅವರ ಹೆಸರಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

Advertisement

ಈಗಾಗಲೇ ಪ್ರೊ| ಶ್ರೀನಿವಾಸ ರಿತ್ತಿ, ಪ್ರೊ| ಕೆ. ಎಸ್‌. ನಿಸಾರ್‌ ಅಹಮದ್‌, ಡಾ| ಬಿ. ಸುರೇಂದ್ರ ರಾವ್‌, ಪ್ರೊ| ಕೆ.ವಿ. ತಿರುಮಲೇಶ್‌, ಪ್ರೊ| ಅಮೃತ ಸೋಮೇಶ್ವರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರೊ| ಎ. ಸುಂದರ ಅವರು ಉಡುಪಿ ಸಮೀಪದ ನೀಲಾವರದವರಾಗಿದ್ದು, ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬಹುಕಾಲ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಬಿಜಾಪುರ ವಿ.ವಿ.ಯ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ, ಮೈಸೂರು ವಿ.ವಿ. ಯ ಝಾಕೀರ್‌ ಹುಸೇನ್‌ ಪೀಠದ ಮುಖ್ಯಸ್ಥರಾಗಿ, ಕಾರ್ಯನಿರ್ವಹಿಸಿ ಅನಂತರ ಶೃಂಗೇರಿಯಲ್ಲಿ ನೆಲೆಸಿ ಪ್ರಸ್ತುತ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಪುರಾತಣ್ತೀ ಶಾಸ್ತ್ರಜ್ಞರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಪ್ರೊ| ಸುಂದರ ಭಾರತದ ಮತ್ತು ವಿಶೇಷವಾಗಿ ಕರ್ನಾಟಕದ ಹಲವಾರು ಉತ್ಖನನಗಳಲ್ಲಿ ( ತೇರದಾಳ, ಸನ್ನತಿ, ಮಲಪ್ರಭಾನದಿ ತೀರ ಮುಂ.) ಮಹತ್ವದ ಪಾತ್ರ ವಹಿಸಿದ್ದಾರೆ. ಸಾಂಸ್ಕೃತಿಕ ಪರಂಪರೆಗಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿದ್ದರು. ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಮುನ್ನೂರಕ್ಕೂ ಹೆಚ್ಚು ಮಹತ್ವದ ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ ಎಂದು ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next