Advertisement

Kalburgi: ರಾಜ್ಯದಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಪ್ರಾಮಾಣಿಕ ಪ್ರಯತ್ನ: ಖರ್ಗೆ

04:31 PM Jan 06, 2024 | Team Udayavani |

ಕಲಬುರಗಿ: ರಾಜ್ಯದಲ್ಲಿ ಖಾಲಿ ಇರುವ 2.40 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Advertisement

ಯುವನಿಧಿ ಯೋಜನೆ ಕುರಿತಾಗಿ ವಿವರಣೆ ನೀಡಲು ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಚಿವರು, ಈಗಾಗಲೇ ಗೃಹ, ಲೋಕೋಪಯೋಗಿ, ಆರ್ ಡಿಪಿಆರ್ ಇಲಾಖೆಯಲ್ಲಿನ ಇಂಜಿನಿಯರ್, ಪಿಡಿಓ ಸೇರಿ ಇತರ ಹುದ್ದೆಗಳನ್ನು ಕೆಪಿಎಸ್ಸಿ, ಕೆಇಎ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಿದರು.

ಬೆಂಗಳೂರಿನಲ್ಲಿ ಉದ್ಯೋಗ ಮೇಳ: ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಇದೇ ಜನೇವರಿ ಅಂತ್ಯಕ್ಕೆ ಇಲ್ಲವೇ ಫೆಬ್ರವರಿ ತಿಂಗಳಿನ ಮೊದಲ‌ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಮೇಳ ಹಿಂದಿನ ಮೇಳಕ್ಕಿಂತ ಭಿನ್ನವಾಗಲಿದ್ದು, ಕೌಶಲ್ಯದೊಂದಿಗೆ ಉದ್ಯೋಗ ಕಲ್ಪಿಸಲು ಮುಂದಾಗಲಾಗಿದೆ ಎಂದರು.

ಜಾತಿಗೊಬ್ಬ ಡಿಸಿಎಂ: ಜಾತಿಗೊಬ್ಬ ಡಿಸಿಎಂ ನೇಮಿಸುವ ಕುರಿತಂತೆ ಕೂಗೆದ್ದಿದೆ ಎನ್ನುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳಲು ಪಕ್ಷದಲ್ಲಿ ಆಂತರಿಕ‌ ಸ್ವಾತಂತ್ರ್ಯ ವಿದೆ. ಆದರೆ,‌ಹೈಕಮಾಂಡ್ ಈ‌ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಎಚ್ ಡಿಡಿ ಮೊದಲು ಜೆಡಿಎಸ್ ಉಳಿಸಿಕೊಳ್ಳಲಿ:

Advertisement

ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡುವ ಮೊದಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮೊದಲು ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಈ ಹಿಂದೆ ಯಾರು ಹೇಗೆ ಸಿಎಂ ಹಾಗೂ ಪ್ರಧಾನಿ ಆಗಿದ್ದರು ಎಂದು ಅವರು ನೋಡಲಿ ಎಂದು ಪ್ರಿಯಾಂಕ್ ಟಾಂಗ್ ಕೊಟ್ಟರು.

ರಾಮಭಕ್ತರು ಯಾರು?: ರಾಮಮಂದಿರ ಉದ್ಘಾಟನೆ ನಡೆಯುತ್ತಿರುವ ಸಂದರ್ಭದಲ್ಲಿ ರಾಮ ಭಕ್ತರ ಮೇಲೆ ರಾಜ್ಯ ಸರ್ಕಾರ ಜೈಲಿಗೆ ಹಾಕುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು 16 ಕೇಸು ಇರುವವರು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಜೂಜು ಆಡಿಸುವವರು, ಅಕ್ರಮ ಸಾರಾಯಿ ಮಾರಾಟ ಮಾಡುವವರು ರಾಮಭಕ್ತರಾ? ಎಂದು ಮರು ಪ್ರಶ್ನೆ ಹಾಕಿದರು. ನಮ್ಮ ಜಿಲ್ಲೆಯಲ್ಲಿಯೇ ಹಲವಾರು ಕೇಸು ಹಾಕಿಸಿಕೊಂಡಿರುವವರು, ಅಪಘಾತವನ್ನು ಹಲ್ಲೆ ಯತ್ನ ಎಂದು ಬಿಂಬಿಸಿದವರು ರಾಮಭಕ್ತರೇ? ಈ ವಿಚಾರದಲ್ಲಿ ಆರ್. ಅಶೋಕ್ ಅವರು ನನ್ನ ರಾಜೀನಾಮೆ ಕೇಳಿದ್ದರು. ಈಗ ಅರೆಸ್ಟ್ ಮಾಡಿ ಎಂದು ಅಭಿಯಾನ ಮಾಡುತ್ತಿದ್ದಾರೆ. ಅಶೋಕಣ್ಣ ನೀವು ಯಾರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದೀರಾ ? ಎಂದು ಯೋಚಿಸಿ ಎಂದು ಕುಟುಕಿದರು.

ಕೇಸು ದಾಖಲಿಸಿದ್ದು ಅಣ್ಣಾಮಲೈ.: ಬಾಬಾಬುಡನಗಿರಿ ವಿಚಾರದಲ್ಲಿ ಭಕ್ತರ ಮೇಲೆ‌ ಕೇಸು ದಾಖಲಿಸಿದ್ದು ಈಗಿನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ. ರಾಮಭಕ್ತರ ಮೇಲೆ ಕರಸೇವಕರ ಮೇಲೆ ಬಿಜೆಪಿ ಸರ್ಕಾರ ಯಾವ ಕೇಸು ದಾಖಲಿಸಿಲ್ಲ. ಆದರೆ, ಬಹಳ ದಿನ ಬಾಕಿ ಇರುವ ವಾರಂಟ್ ಕೇಸ್ ಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿದ್ದರಿಂದ ರಾಜ್ಯ ಸರ್ಕಾರ ಕ್ರಮವಹಿಸುತ್ತಿದೆ. ಈ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ ಅವರೇಕೆ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಲಿಲ್ಲ‌ ಎಂದು ಪ್ರಶ್ನಿಸಿದರು.

ಕೇಸರಿ ಶಾಲು ಹಾಕಿದ ತಕ್ಷಣ ಬಿಡಬೇಕೆ?

ಕೇಸರಿ ಶಾಲು ಹಾಕಿಕೊಂಡು ಅಕ್ರಮ ಚಟುವಟಿಕೆ‌ ನಡೆಸಿದರೆ ಸುಮ್ಮನಿರಬೇಕೆ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಎಂಪಿ ಚುನಾವಣೆಗೆ ಸಚಿವರು ರೆಡಿ: ಹೈಕಮಾಂಡ್ ಸೂಚಿಸಿದರೆ ಸಚಿವರು‌ಗಳು ಮುಂಬರುವ ಎಂ ಪಿ ಚುನಾವಣೆಗೆ ನಿಲ್ಲಲು ರೆಡಿಯಾಗಿರುವುದಾಗಿ ಹೇಳಿದ ಸಚಿವರು, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಖರ್ಗೆ ಹೇಳಿದರು.

ರಾಮಭಕ್ತರೇ?: ನೀವು ರಾಮಭಕ್ತರೇ? ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಿದರೆ ಹೋಗುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ನಾನು ಸಂವಿಧಾನ ಭಕ್ತ. ನನಗೆ ಆಹ್ವಾನ ನೀಡಲು ಬಿಜೆಪಿಯರು ಯಾರು? ಬಿಜೆಪಿಯವರ ಸೂಚನೆಯಂತೆ ಟ್ರಸ್ಟ್ ಆಹ್ವಾನ ನೀಡುತ್ತಿದೆ. ಅಲ್ಲಿ ನಡೆಯುತ್ತಿರುವುದು ಒನ್ ಮ್ಯಾನ್ ಶೋ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next