Advertisement

ಬಿಜೆಪಿಯನ್ನು ಒಂದಂಕಿಗೆ ಇಳಿಸಲು ಕೈ ಪಣ

06:58 PM Jan 25, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌, ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಒಂದಂಕಿಗಿಳಿಸಲು ಪಣ ತೊಟ್ಟಿದೆ.

Advertisement

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ನಡೆದ ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬೂತ್‌ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಳಮಟ್ಟದಿಂದ ಕಾರ್ಯಕರ್ತರ ಪಡೆಯನ್ನು ಬಲಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ನಿರ್ಧರಿಸಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಯೊಂದು ಕ್ಷೇತ್ರವೂ ಮಹತ್ವದ್ದಾಗಿದ್ದರಿಂದ ಯಾವ ಕ್ಷೇತ್ರವನ್ನೂ ನಿರ್ಲಕ್ಷ್ಯ ಮಾಡದೆ ಪಕ್ಷದ ಮುಂಚೂಣಿ ಘಟಕಗಳಾದ ಹಿಂದುಳಿದ ವರ್ಗಗಳ ಘಟಕ, ಅಲ್ಪಸಂಖ್ಯಾತ ಘಟಕ, ಮಹಿಳಾ ಘಟಕ, ಯುವ ಘಟಕ, ಎಸ್ಸಿ/ಎಸ್ಟಿ ಘಟಕಗಳು ಸಕ್ರಿಯರಾಗಿ ಕೆಲಸ ಮಾಡಿ, ಆಯಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಎಲ್ಲ ಸಮುದಾಯಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರತಿಯೊಂದು ಘಟಕದಿಂದಲೂ ಚುನಾವಣೆ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರನ್ನು ಸೆಳೆಯಲು ಪ್ರಯತ್ನಿಸಬೇಕೆಂದು ಸೂಚಿಸಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಜಾತಿವಾರು ಸಮಾವೇಶಗಳನ್ನು ನಡೆಸಿ, ಎಲ್ಲಾ ಸಮುದಾಯಗಳನ್ನು ಕಾಂಗ್ರೆಸ್‌ನತ್ತ ಸೆಳೆಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.

ಪ್ರಿಯಾಂಕಾ ಅಸ್ತ್ರ: ಶೇ.50ರಷ್ಟು ಮತದಾರರಾಗಿರುವ ಮಹಿಳೆಯರನ್ನು, ವಿಶೇಷವಾಗಿ ಯುವತಿಯರನ್ನು ಕಾಂಗ್ರೆಸ್‌ ಕಡೆಗೆ ಸೆಳೆಯಲು ಪ್ರಿಯಾಂಕಾ ಗಾಂಧಿ ಅವರನ್ನೇ ಬಿಂಬಿಸಲು ನಿರ್ಧರಿಸ ಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ಹೋಲುವುದರಿಂದ ಇಂದಿರಾ ಗಾಂಧಿ ಕಾಲದ ಹಿರಿಯ ಮತದಾರರು ಅವರ ಬಗ್ಗೆ ಆಕರ್ಷಿತರಾಗಬಹುದು. ಅವರೊಂದಿಗೆ ಯುವತಿಯರಿಗೂ ಇಂದಿರಾ ಗಾಂಧಿಯ ಸಾಧನೆಗಳ ಬಗ್ಗೆ ತಿಳಿಸುವ ಮೂಲಕ ಕಾಂಗ್ರೆಸ್‌ ಕಡೆಗೆ ಸೆಳೆಯಲು ಮಹಿಳಾ ಘಟಕದಿಂದ ಶ್ರಮಿಸುವಂತೆ ನಿರ್ದೇಶನ ನೀಡಲಾಗಿದೆ.

ಸಮ್ಮಿಶ್ರ ಗೊಂದಲ ಬೇಡ: ಜೆಡಿಎಸ್‌ ಜೊತೆಗೆ ಮೈತ್ರಿಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿರುವುದರಿಂದ ಮೈತ್ರಿ ಪಕ್ಷದಲ್ಲಿ ಯಾವ ಪಕ್ಷದ ಅಭ್ಯರ್ಥಿಯಾದರೂ ಗೆಲ್ಲಿಸಿಕೊಂಡು ಬರಲು ಶ್ರಮಿಸಬೇಕು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಬಲ ಹೆಚ್ಚಳಕ್ಕೆ ಇದು ಪೂರಕವಾಗುವುದಲ್ಲದೆ ಬಿಜೆಪಿಯನ್ನು ಒಂದಂಕಿಗೆ ಇಳಿಸಲು ಅನುಕೂಲವಾಗುತ್ತದೆ ಎಂದು ರಾಜ್ಯಾಧ್ಯಕ್ಷರು ಕಿವಿ ಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೇಂದ್ರ ಸರ್ಕಾರದ ಜನಪ್ರಿಯತೆ ಇನ್ನೂ ಕುಸಿಯಲಿದೆ. ಮೋದಿಯವರ ಮಾತಿಗೆ ರಾಷ್ಟ್ರದ ಜನತೆ ಬೇಸತ್ತು
ಹೋಗಿದ್ದಾರೆ. ದೇಶದ ಜನತೆಗೆ ಅಚ್ಛೇ ದಿನ್‌ ಬರಲೇ ಇಲ್ಲ. ಕೆಟ್ಟ ದಿನಗಳೇ ಬಂದಿವೆ.
● ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next