ರಾಯ್‌ಬರೇಲಿಯಲ್ಲಿ ತಾಯಿ ಸೋನಿಯಾ ಗಾಂಧಿ ಪರ ಪ್ರಚಾರ ನಡೆಸುತ್ತಿರುವ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾವಾಡಿಗರ ಜತೆ ಮಾತನಾಡುತ್ತಾ, ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆಲ ಹೊತ್ತು ಹಾವಾಡಿಗರ ಜೊತೆ ಕಳೆದ ಪ್ರಿಯಾಂಕಾ, ಬುಟ್ಟಿಯಲ್ಲಿದ್ದ ಹಾವಿನ ತಲೆಯನ್ನು ಕೈಯಿಂದ ತಟ್ಟಿದರು. ನಂತರ ಒಂದು ಹಾವನ್ನು ಹಿಡಿದುಕೊಂಡಿದ್ದರು. ಹಾವು ಕಚ್ಚಬಹುದು ಎಂದು ಬೆಂಬಲಿಗರು ಎಚ್ಚರಿಸಿದಾಗ, ಇವು ಏನೂ ಮಾಡುವುದಿಲ್ಲ. ಹೆದರಬೇಡಿ ಎಂದು ಬೆಂಬಲಿಗರಿಗೆ ಧೈರ್ಯ ತುಂಬಿದರು. ಈ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅಂದಹಾಗೆ ನೆಹರು ಕುಟುಂಬಕ್ಕೂ ಹಾವಾಡಿಗರಿಗೂ ವಿಚಿತ್ರ ಸಂಬಂಧವಿದೆ. 1962ರಲ್ಲಿ ಅಮೆರಿಕದ ಪ್ರಥಮ ಮಹಿಳೆ ಜಾಕೆಲಿನ ಕೆನಡಿ ಭಾರತಕ್ಕೆ ಆಗಮಿಸಿದ್ದಾಗ, ಅವರಿಗೆ ಮಾಜಿ ಪ್ರಧಾನಿ ಜವಾಹರಲಾಲ ನೆಹರು ಹಾವಾಡಿಗರನ್ನು ತೋರಿಸಿದ್ದರು. ಆ ಫೋಟೋ ಇಂದಿಗೂ ಭಾರಿ ಜನಪ್ರಿಯವಾಗಿದೆ.