Advertisement

ಪ್ರಿಯಾಂಕಾ ಸೆಕೆಂಡ್‌ ಸ್ಟೋರಿ: ಹೆಣ್ಣು, ಬದುಕು ಮತ್ತು ದುಗುಡ

12:11 PM Oct 02, 2017 | Team Udayavani |

“ಫ‌ಸ್ಟ್‌ ಹಾಫ್ನ ಪ್ರಶ್ನೆಗಳಿಗೆ, ಸೆಕೆಂಡ್‌ ಹಾಫ್ನಲ್ಲಿ ಉತ್ತರ ಸಿಗಲಿದೆ …’ ಹೀಗೆ ಹೇಳಿ ಪೋಸ್ಟರ್‌ ಕಡೆ ನೋಡಿದರು ನಿರ್ದೇಶಕ ಯೋಗಿ ದೇವಗಂಗೆ. ಅಲ್ಲಿ “ಸೆಕೆಂಡ್‌ ಹಾಫ್’ ಚಿತ್ರದ ಪೋಸ್ಟರ್‌ ಇತ್ತು. “ಸೆಕೆಂಡ್‌ ಹಾಫ್’ ಯೋಗಿ ದೇವಗಂಗೆ ನಿರ್ದೇಶನದ ಸಿನಿಮಾ. ಪ್ರಿಯಾಂಕಾ ಉಪೇಂದ್ರ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಡೆಯುತ್ತದೆ. ಇಡೀ ಚಿತ್ರ ಅವರ ಸುತ್ತವೇ ಸಾಗಲಿದೆ ಕೂಡಾ. ಈ ಹಿಂದೆ ಯೋಗರಾಜ ಭಟ್‌, ಸೂರಿಯವರ ಜೊತೆ ಕೆಲಸ ಮಾಡಿ ಅನುಭವಿರುವ ಯೋಗಿ ದೇವಗಂಗೆ, ತಮ್ಮ ಚೊಚ್ಚಲ ಸಿನಿಮಾದಲ್ಲಿ ಒಂದಷ್ಟು ಹೊಸ ವಿಷಯಗಳನ್ನು ಹೇಳಿದ್ದಾರಂತೆ.

Advertisement

ಹೊಸ ವಿಷಯ ಅಂದಾಕ್ಷಣ ಔಟ್‌ ಆಫ್ ವರ್ಲ್ಡ್ ಎಂದು ನೀವಂದುಕೊಳ್ಳಬೇಕಿಲ್ಲ. ನಮ್ಮ ಸಮಾಜದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಅಂಶಗಳನ್ನು ಸೇರಿಸಿ ಈ ಸಿನಿಮಾ ಮಾಡಿದ್ದಾರೆ ಯೋಗಿ. ನಮ್ಮ ಸಮಾಜದಲ್ಲಿ ನಡೆದ ಕೆಲವು ಘಟನೆಗಳು ಮತ್ತು ಅದರ ತೀವ್ರತೆ, ಅವುಗಳು ಸಮಾಜದ ಮೇಲೆ ಬೀರಿದ ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ಈ ಕಥೆ ಮಾಡಿದ್ದಾರಂತೆ ಯೋಗಿ. “ಪ್ರೀತಿ, ವಿಶ್ವಾಸ, ಹೆಣ್ಣು, ಬದುಕು, ಹಾಗೂ ಪೊಲೀಸ್‌ ವ್ಯವಸ್ಥೆಯಲ್ಲಿನ ದುಗುಡಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಇದು ರೆಗ್ಯುಲರ್‌ ಪ್ಯಾಟರ್ನ್ ಸಿನಿಮಾವಲ್ಲ.

ಚಿತ್ರದ ಫ‌ಸ್ಟ್‌ಹಾಫ್ ಒಂದು ರೀತಿ ಇದ್ದರೆ, ಸೆಕೆಂಡ್‌ ಹಾಫ್ ಇನ್ನೊಂದು ರೀತಿ ಇದೆ. ಫ‌ಸ್ಟ್‌ಹಾಫ್ನ ಎಲ್ಲಾ ಪ್ರಶ್ನೆಗಳಿಗೆ ಸೆಕೆಂಡ್‌ ಹಾಫ್ನಲ್ಲಿ ಉತ್ತರ ಸಿಗಲಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು. ಇನ್ನು ಚಿತ್ರ ತಾಂತ್ರಿಕವಾಗಿಯೂ ಚಿತ್ರ ಶ್ರೀಮಂತವಾಗಿದೆ ಎನ್ನಲು ಅವರು ಮರೆಯಲಿಲ್ಲ. ಚಿತ್ರವನ್ನು ನಾಗೇಶ್‌ ನಿರ್ಮಿಸಿದ್ದಾರೆ. ನಾಗೇಶ್‌ ಅವರಿಗೆ ನಿರ್ದೇಶಕ ಯೋಗಿ ಮೂರು ವರ್ಷಗಳ ಸ್ನೇಹಿತರಂತೆ. ಅದೊಂದು ದಿನ ಸಿಕ್ಕ ಯೋಗಿ, ತಾನೊಂದು ಕಥೆ ಮಾಡಿಕೊಂಡಿದ್ದೇನೆ ಎಂದೇಳಿ ಒನ್‌ಲೈನ್‌ ಹೇಳಿದರಂತೆ. ಕಥೆ ಕೇಳಿದ ನಾಗೇಶ್‌, ಕಥೆ ತುಂಬಾ ಚೆನ್ನಾಗಿದೆ.

ಯಾರಾದರೂ ಒಳ್ಳೆಯ ನಿರ್ಮಾಪಕರನ್ನು ಹುಡುಕಿ ಎಂದರಂತೆ. ಆದರೆ, ನಾಗೇಶ್‌ ಅವರ ಪತ್ನಿ, ಈ ಸಿನಿಮಾವನ್ನು ನಾವೇ ನಿರ್ಮಿಸುವ ಎಂದಾಗ ಮೊದಲು ಬೇಡ ಎಂದ ನಾಗೇಶ್‌ ಕೊನೆಗೆ ಒಪ್ಪಿಕೊಂಡು ಸಿನಿಮಾ ಮಾಡಿದ್ದಾರೆ. “ನಾವು ಸಿನಿಮಾ ಕುಟುಂಬದವರಲ್ಲ. ನಮಗ್ಯಾಕೆ ಸಿನಿಮಾ ಬೇಕು ಎಂದು ದೂರವಿದ್ದೆ. ಆದರೆ ನನ್ನ ಹೆಂಡತಿಗೆ ಸಿನಿಮಾ ಮಾಡುವ ಇಷ್ಟವಿತ್ತು. ಅದಕ್ಕೆ ಕಾರಣ ಕಥೆ. ಕೊನೆಗೆ ಸಿನಿಮಾ ಮಾಡಲು ಒಪ್ಪಿದೆ. “ನನಗೆ ಗುಣಮಟ್ಟದ ಸಿನಿಮಾ ಮಾಡಿಕೊಡಿ’ ಎಂದು ನಿರ್ಮಾಣ ಮಾಡಿದೆ’ ಎಂದು ತಾವು ಅಚಾನಕ್‌ ಆಗಿ ನಿರ್ಮಾಪಕರಾದ ಬಗ್ಗೆ ಹೇಳಿದರು. 

ಪ್ರಿಯಾಂಕಾ ಉಪೇಂದ್ರ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್‌ ಪೇದೆ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ಅವರ ಸುತ್ತವೇ ಸುತ್ತುತ್ತದೆ. ಚಿತ್ರದಲ್ಲಿ ಅವರು ಟಿವಿಎಸ್‌ ಓಡಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಟಿವಿಎಸ್‌ ಕಲಿತರಂತೆ. “ಯೋಗಿ ತುಂಬಾ ಹೊಸತನದ ಕಥೆ ಮಾಡಿದ್ದಾರೆ. ಪಾತ್ರ ಕೂಡಾ ವಿಭಿನ್ನವಾಗಿದೆ. ಈ ಪಾತ್ರಕ್ಕೆ ನಾನು ಟಿವಿಎಸ್‌ ಕಲಿಯಬೇಕಿತ್ತು. ನನಗೆ ಬರುತ್ತಿರಲಿಲ್ಲ. ಹಾಗಾಗಿ, ಟಿವಿಎಸ್‌ ಬದಲು ಜೀಪ್‌ ಓಡಿಸುತ್ತೆ¤àನೆ ಅಂದೆ. ಆದರೆ, ಕಾನ್‌ಸ್ಟಬಲ್‌ಗೆ ಜೀಪ್‌ ಕೊಡಲ್ಲ, ನೀವು ಟಿವಿಎಸ್‌ ಕಲಿಯಬೇಕು ಎಂದಿದ್ದಕ್ಕೆ ಕಲಿತೆ.

Advertisement

ಈಗ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಖುಷಿಯ ವಿಚಾರವೆಂದರೆ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ಖುಷಿಯಾದರು ಪ್ರಿಯಾಂಕಾ. ನಿರಂಜನ್‌ ಕೂಡಾ ತಮ್ಮ ಚಿಕ್ಕಮ್ಮನ ಜೊತೆ ನಟಿಸಿದ ಖುಷಿ ಹಂಚಿಕೊಂಡರು. “ನಿರ್ದೇಶಕರು ಆಡಿಷನ್‌ ಮಾಡಿದ ನಂತರ ಈ ಸಿನಿಮಾಕ್ಕೆ “ನೀವು ಆಯ್ಕೆಯಾಗಿದ್ದೀರಿ’ ಎಂದಾಗ ಖುಷಿಯಾಯಿತು. ಇಲ್ಲಿ ನನ್ನ ಪಾತ್ರದ ಹೆಸರು ವಾಟರ್‌. ಮೊದಲ ಸಿನಿಮಾದಲ್ಲೇ ಒಳ್ಳೆಯ ತಂಡ ಸಿಕ್ಕಿದೆ’ ಎಂದರು. ಚಿತ್ರದಲ್ಲಿ ಶರತ್‌ ಲೋಹಿತಾಶ್ವ ಕೂಡಾ ನಟಿಸಿದ್ದಾರೆ.

ಸಾಮಾನ್ಯವಾಗಿ ಈಗಿನ ನಿರ್ದೇಶಕರು ಫೋನ್‌ನಲ್ಲೇ ಪಾತ್ರ ವಿವರಿಸಿದರೆ, ಯೋಗಿ ಮಾತ್ರ ಮನೆಗೆ ಬಂದು ಕಥೆ ಹೇಳಿದರಂತೆ. “ಯೋಗಿ ಕಥೆ ಹೇಳಿದಾಗ ಇಡೀ ಸಿನಿಮಾನೇ ನೋಡಿದಂತಾಯಿತು. ತುಂಬಾ ಟ್ಯಾಲೆಂಟ್‌ ಇರುವ ನಿರ್ದೇಶಕ. ನಾನು ತುಂಬಾ ಎಂಜಾಯ್‌ ಮಾಡಿದ ಕಥೆ. ಈ ರೀತಿಯೂ ಸಿನಿಮಾ ಮಾಡಬಹುದಾ ಎಂದು ಅನಿಸಿದಂತಹ ಕಥೆ ಇದು’ ಎಂದು ಖುಷಿ ಹಂಚಿಕೊಂಡರು ಶರತ್‌ ಲೋಹಿತಾಶ್ವ. ಚಿತ್ರದಲ್ಲಿ ಸುರಭಿ ಕೂಡಾ ನಟಿಸಿದ್ದಾರೆ. ಅವರು ಕೂಡಾ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಆರ್‌.ಕೆ.ಶಿವಕುಮಾರ್‌ ಛಾಯಾಗ್ರಹಣ, ಚೇತನ್‌ ಸೋಸ್ಕಾ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next