ಮಂಗಳೂರು: ಮದುವೆ ನಿಗದಿಯಾದ ಬಳಿಕ ನಾಪತ್ತೆಯಾಗಿದ್ದ ಯುವತಿ ಧರೆಗುಡ್ಡೆಯ ಪ್ರಿಯಾಂಕಾ (25) ತನಿಖೆಗೆ ತೆರಳಿದ ನಗರ ಪೊಲೀಸರಿಗೆ ಪ್ರಿಯಕರನ ಜತೆ ಪತ್ತೆಯಾಗಿದ್ದಾಳೆಂದು ಮೂಲಗಳಿಂದ ತಿಳಿದು ಬಂದಿದೆ.
ಈಕೆಯ ಮದುವೆ ಡಿ. 11ರಂದು ನಿಗದಿಯಾಗಿತ್ತು. ಆದರೆ ಈ ನಡುವೆ ಡಿ. 9ರಂದು ಮೆಹಂದಿ ಕಾರ್ಯಕ್ರಮವಿತ್ತು. ಡಿ. 8ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ ವೇಳೆ, ಆಕೆ ನಾಪತ್ತೆಯಾಗಿದ್ದಳು.
ಪ್ರಿಯಾಂಕಾಳ ಕುಟುಂಬ 2 ವರ್ಷಗಳಿಂದ ಇನೋಳಿಯಲ್ಲಿ ವಾಸಿಸುತ್ತಿದ್ದು, ಅದೇ ಊರಿನ ನಿವಾಸಿ ಹೈದರ್ ಜತೆ ಆಕೆಗೆ ಪ್ರೀತಿ ವ್ಯವಹಾರವಿತ್ತೆಂದು ತಿಳಿದು ಬಂದಿದೆ. ಬಳಿಕ ಪ್ರಿಯಾಂಕಾ ಕುಟುಂಬ ದರೆಗುಡ್ಡೆಗೆ ಸ್ಥಳಾಂತರವಾಗಿತ್ತು. ಈ ಮಧ್ಯೆ ಯುವತಿಗೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕನ ಜತೆ ಮದುವೆ ನಿಶ್ಚಿತಾರ್ಥವಾಗಿ ಡಿ. 11ರಂದು ಮದುವೆ ನಡೆಯಬೇಕಿತ್ತು. ಆಕೆ ಏಕಾಏಕಿ ನಾಪತ್ತೆಯಾಗಿದ್ದ ಕಾರಣ ಮದುವೆ ರದ್ದಾಗಿತ್ತು. ಪರಾರಿಯಾಗುವಾಗ 10 ಪವನ್ ಚಿನ್ನಾಭರಣ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಇತರ ವಸ್ತುಗಳನ್ನು ತನ್ನೊಂದಿಗೆ ಒಯ್ದಿದ್ದಳು ಎನ್ನಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪಣಂಬೂರು ಮತ್ತು ಮೂಡಬಿದಿರೆ ಪೊಲೀಸರ ತನಿಖಾ ತಂಡವನ್ನು ರಚಿಸಿ ಶೋಧಕ್ಕೆ ಮುಂಬಯಿಗೆ ತೆರಳಿತ್ತು. ಇದೀಗ ಈ ತಂಡಕ್ಕೆ ಪ್ರಿಯಾಂಕಾ ಸಿಕ್ಕಿದ್ದಾಳೆಂದು ತಿಳಿದುಬಂದಿದ್ದು, ಸ್ಪಷ್ಟ ಚಿತ್ರಣ ಇನ್ನಷ್ಟೇ ಸಿಗಬೇಕಿದೆ.