ಹೊಸದಿಲ್ಲಿ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಇಂದು ಶನಿವಾರ ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದು ಈ ಕ್ಷೇತ್ರವನ್ನು ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗಂಭೀರ ಚಿಂತನೆ ನಡೆಸಿದ ತರುವಾಯ ವಾರಾಣಸಿ ಕ್ಷೇತ್ರದಿಂದ ಮೋದಿ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಕೆ ಈಗಾಗಲೇ ವಾರಾಣಸಿಯಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಗಿದ್ದರೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಸ್ಪರ್ಧೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮಾರ್ಚ್ ತಿಂಗಳಲ್ಲೇ ಪ್ರಿಯಾಂಕಾ ಅವರನ್ನು ರಾಯ್‌ಬರೇಲಿಯಿಂದ ಅಥವಾ ಅಮೇಠಿಯಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಆಕೆಯ ಪಕ್ಷದ ಬೆಂಬಲಿಗರು ಒತ್ತಾಯಿಸಿದ್ದರು.
ಆಗ ಪ್ರಿಯಾಂಕಾ ಅವರು “ವಾರಾಣಸಿಯಿಂದಲೇ ನಾನೇಕೆ ಸ್ಪರ್ಧಿಸಬಾರದು’ ಎಂದು ಲಘು ಧಾಟಿಯಲ್ಲಿ ಉತ್ತರಿಸಿದ್ದರು.