ಬನಸ್ಕಾಂತ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಶೆಹಜಾದಾ’ ಎಂದು ಟೀಕೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಬನಸ್ಕಾಂತದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ 4000 ಕಿಲೋಮೀಟರ್ ನಡೆಯುತ್ತಿದ್ದರೆ, ಪ್ರಧಾನಿ ಮೋದಿ ಅವರು ಅರಮನೆಯಲ್ಲಿ ಕುಳಿತಿದ್ದಾರೆ. ಅವರು ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ.
ಪಿಎಂ ಮೋದಿ ನನ್ನ ಸಹೋದರನನ್ನು ‘ಶೆಹಜಾದಾ’ ಎನ್ನುತ್ತಿದ್ದಾರೆ. ಆದರೆ ನನ್ನ ಸಹೋದರ (ರಾಹುಲ್ ಗಾಂಧಿ) 4,000 ಕಿ.ಮೀ ನಡೆದಿದ್ದಾರೆ, ಜನರನ್ನು ತಲುಪಿ ಅವರ ಕಷ್ಟಗಳನ್ನು ಕೇಳಿದ್ದಾರೆ. ಆದರೆ ಮತ್ತೊಂದೆಡೆ ಸಾಮ್ರಾಟ ನರೇಂದ್ರ ಮೋದಿ ಅರಮನೆಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ಸಂಕಷ್ಟದಲ್ಲಿರುವ ರೈತರ ಮತ್ತು ಮಹಿಳೆಯರ ಕಷ್ಟಗಳು ಹೇಗೆ ಅರ್ಥವಾಗಬೇಕು? ನರೇಂದ್ರ ಮೋದಿ ಅವರು ಅಧಿಕಾರದಿಂದ ಸುತ್ತುವರಿದಿದ್ದಾರೆ. ಅವರ ಸುತ್ತಲಿನ ಜನರು ಅವರಿಗೆ ಭಯಪಡುತ್ತಾರೆ. ಯಾರೂ ಅವರಿಗೆ ಏನನ್ನೂ ಹೇಳುವುದಿಲ್ಲ. ಯಾರಾದರೂ ಧ್ವನಿ ಎತ್ತಿದರೂ, ಆ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ”ಎಂದು ಪ್ರಿಯಾಂಕಾ ಹೇಳಿದರು.
ಪ್ರಧಾನಿ ಮೋದಿ ಅವರು ತನ್ನ ಇತ್ತೀಚಿನ ಭಾಷಣಗಳಲ್ಲಿ ರಾಹುಲ್ ಗಾಂಧಿಯವರನ್ನು ಶೆಹಜಾದ್ (ರಾಜಕುಮಾರ) ಎಂದು ಉಲ್ಲೇಖಿಸುತ್ತಿದ್ದಾರೆ.
“ಇಂದಿನ ಪ್ರಧಾನಿಯವರ ಕಾರ್ಯಶೈಲಿ ನೋಡಿ. ಗುಜರಾತ್ ಪ್ರಧಾನಿ ಮೋದಿಗೆ ಗೌರವ ನೀಡಿತು ಮತ್ತು ಅಧಿಕಾರ ನೀಡಿತು, ಆದರೆ ಅವರನ್ನು ದೊಡ್ಡ ಜನರೊಂದಿಗೆ ಮಾತ್ರ ನೋಡಲಾಗುತ್ತದೆ. ಪ್ರಧಾನಿ ಮೋದಿ ರೈತರನ್ನು ಭೇಟಿ ಮಾಡಿರುವುದನ್ನು ನೀವು ನೋಡಿದ್ದೀರಾ? ಕರಾಳ ಕಾನೂನನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನೂರಾರು ರೈತರು ಹುತಾತ್ಮರಾಗಿದ್ದರೂ ಅವರನ್ನು ಭೇಟಿ ಮಾಡಲು ಪ್ರಧಾನಿ ಹೋಗುತ್ತಿಲ್ಲ. ಚುನಾವಣೆಗಳು ಬಂದ ತಕ್ಷಣ ಅವರಿಗೆ ಮತ ಸಿಗುವುದಿಲ್ಲ ಎಂದು ಭಾವಿಸಿದರೆ, ಪ್ರಧಾನಿ ಮೋದಿ ಕಾನೂನನ್ನು ಬದಲಾಯಿಸುತ್ತಾರೆ”ಎಂದು ಪ್ರಿಯಾಂಕಾ ಹೇಳಿದರು.