Advertisement

ಅಜ್ಜಿಯಂತೆಯೇ ನಮ್ಮ ಕೈಯನ್ನೂ ಹಿಡಿಯಿರಿ: ಪ್ರಿಯಾಂಕಾ ಭಾವನಾತ್ಮಕ ಹೇಳಿಕೆ

12:36 AM Apr 27, 2023 | Team Udayavani |

ಬಾಳೆಹೊನ್ನೂರು/ಶೃಂಗೇರಿ: “ನಮ್ಮ ಅಜ್ಜಿ ಇಂದಿರಾ ಗಾಂಧಿ ಸಂಕಷ್ಟದಲ್ಲಿದ್ದಾಗ ಕೈಹಿಡಿದಿದ್ದಿರಿ, ಈಗ ನಾವೂ ಸಂಕಷ್ಟದಲ್ಲಿದ್ದೇವೆ. ನಮ್ಮ ಕೈಯನ್ನೂ ಹಿಡಿದು ಮೇಲೆತ್ತಿ…’

Advertisement

– ಇದು ಶೃಂಗೇರಿಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಭಾವನಾತ್ಮಕ ಮನವಿ. 45 ವರ್ಷಗಳ ಹಿಂದೆ ತಪ್ಪು ಕೇಸಿನಿಂದಾಗಿ ನಮ್ಮ ಅಜ್ಜಿ  ಲೋಕಸಭಾ ಸದಸ್ಯತ್ವ ಕಳೆದುಕೊಂಡಿದ್ದರು. ಈಗ ನನ್ನ ಸಹೋದರ ಕೂಡ ತಪ್ಪು ಕೇಸಿನಿಂದಲೇ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ಇಲ್ಲಿನ ದೇವರ ಮತ್ತು ಜನರ ಆಶೀರ್ವಾದದೊಂದಿಗೆ ಮತ್ತೆ ಗೆದ್ದು ಬರುತ್ತೇವೆ ಎಂದರು.

ನಾನೀಗ ಶೃಂಗೇರಿ ಶಾರದಾ ಮಾತೆಯ ಸನ್ನಿಧಾನಕ್ಕೆ ಬಂದಿದ್ದೇನೆ. ನಾನು ಇಲ್ಲಿನ ಶ್ರೀಗಳನ್ನು ಭೇಟಿ ಮಾಡಿದೆ. ಅವರು ನಮ್ಮ ಅಜ್ಜಿ ಇಲ್ಲಿಂದ ಸ್ಪರ್ಧಿಸಿದ್ದ ಬಗ್ಗೆ ಕೇಳಿದರು. ಜತೆಗೆ ನನಗೆ ಆಶೀರ್ವಾದ ಮಾಡಿದರು. ಆಗ ನಾನು ನಮ್ಮ ಅಣ್ಣನಿಗೂ ಆಶೀರ್ವಾದ ಮಾಡುವಂತೆ ಕೇಳಿದೆ, ಅವರನ್ನೂ ಹರಸಿದರು ಎಂದು ಪ್ರಿಯಾಂಕಾ ಹೇಳಿದರು.

ಬಾಳೆಹೊನ್ನೂರಿನಲ್ಲಿ ಮಾತನಾಡಿ, ಇಂದಿರಾ ಗಾಂಧಿ ಸಂಕಷ್ಟದಲ್ಲಿದ್ದಾಗ ಇಲ್ಲಿಗೆ ಬಂದು ಸ್ಪರ್ಧಿಸಿ ಗೆದ್ದರು. ಈಗಲೂ ನಮ್ಮ ಕುಟುಂಬ ಕಷ್ಟದಲ್ಲಿದ್ದು, ಆಗ ಇಂದಿರಾ ಗಾಂಧಿಯವರು ಕೇಳಿದಂತೆ, ಅದೇ ಮೈದಾನದಲ್ಲಿ, ಅದೇ ವೇದಿಕೆಯಲ್ಲಿ ಅದೇ ರೀತಿಯ ವಾತಾವರಣದಲ್ಲಿ ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ, ನಮ್ಮನ್ನು ಹರಸಿ ಎಂದು ಪ್ರಿಯಾಂಕಾ ಮನವಿ ಮಾಡಿದರು.

ಹುಸಿಯಾದ ಭರವಸೆ

Advertisement

ದೇಶದಲ್ಲಿ ಬಿಜೆಪಿ ಸರಕಾರ ಬರುವ ಮುನ್ನ ಬಿಜೆಪಿ ನೀಡಿದ ಆಶ್ವಾಸನೆಗಳು ಹುಸಿಯಾಗಿವೆ. ಜನಸಾಮಾನ್ಯರ ಬ್ಯಾಂಕ್‌ ಖಾತೆಗೆ ಹಣ ಹಾಕಲೇ ಇಲ್ಲ. 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಬದಲಾಗಿ ಬಂಡವಾಳಶಾಹಿಗಳ ಬೆನ್ನಿಗೆ ನಿಂತು ಅವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ವಾಮಮಾರ್ಗದಿಂದ ಕಾಂಗ್ರೆಸ್‌ ಶಾಸಕರನ್ನು ಖರೀದಿ ಮಾಡಿ ಅಧಿಕಾರ ಹಿಡಿದಿದೆ ಎಂದರು.

ನನ್ನ ತಂದೆ ರಾಜೀವ್‌ ಗಾಂಧಿ ಹೊಂದಿದ್ದ ಮಾಹಿತಿ ತಂತ್ರಜ್ಞಾನದ ಕನಸು ಇಂದು ನನಸಾಗಿದೆ. ಲಕ್ಷಾಂತರ ಜನರಿಗೆ ಐಟಿ ಕಂಪೆನಿಗಳಲ್ಲಿ ಉದ್ಯೋಗ ದೊರಕಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕಾಂಗ್ರೆಸ್‌ ತನ್ನ ಗ್ಯಾರಂಟಿ ಕಾರ್ಡ್‌ನಲ್ಲಿ ಘೋಷಿಸಿದ್ದನ್ನು ಈಡೇರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next