ಕಾಂಗ್ರೆಸ್‌ಗೆ ಆಘಾತ ಮತ್ತು ಅಚ್ಚರಿಯ ಬೆಳವಣಿಗೆಯೆಂಬಂತೆ, ಪಕ್ಷದ ಪ್ರಮುಖ ವಕ್ತಾರರಲ್ಲಿ ಒಬ್ಬರಾಗಿದ್ದ ಪ್ರಿಯಾಂಕಾ ಚತುರ್ವೇದಿ ಏಕಾಏಕಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಟ್ವಿಟರ್ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನಿ ಸಿದ, 24 ಗಂಟೆಗಳ ಒಳಗಾಗಿ ಪ್ರಿಯಾಂಕಾ ಪಕ್ಷಾಂತರ ಮಾಡಿದ್ದಾರೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಸಮ್ಮುಖದಲ್ಲಿ ಚತುರ್ವೇದಿ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದ ಕೆಲವು ಸದಸ್ಯರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಪ್ರಿಯಾಂಕಾ, 2 ದಿನಗಳ ಹಿಂದಷ್ಟೇ ತಾವು ದೂರು ನೀಡಿದ ಹೊರತಾಗಿಯೂ ಪಕ್ಷವು ಆ ಸದಸ್ಯರನ್ನು ಮುಂದುವರಿಯಲು ಬಿಟ್ಟಿದೆ ಎಂದು ಟ್ವೀಟ್ ಮಾಡಿದ್ದರು. ಈಗ ಇದರಿಂದ ಮನನೊಂದು ನನ್ನ 10 ವರ್ಷಗಳ ಕಾಂಗ್ರೆಸ್ ಸಹಯೋಗ ತೊರೆದಿದ್ದೇನೆ ಎಂದು ಅವರು ಹೇಳಿದ್ದಾರೆ.