Advertisement

ಸಂತ್ರಸ್ತರ ಮನೆಗೆ ಪ್ರಿಯಾಂಕ್‌ ಭೇಟಿ-ಸಾಂತ್ವನ

12:03 PM Mar 29, 2019 | Team Udayavani |

ಚಿತ್ತಾಪುರ: ಕ್ಯಾಂಟರ್‌ ಹಾಗೂ ಕ್ರೂಸರ್‌ ಮಧ್ಯೆ ಕಳೆದ ಮಾ. 22ರಂದು ಭೀಕರ ಅಪಘಾತ ಸಂಭವಿಸಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಬಳಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಪಟ್ಟಣದ ಒಂಭತ್ತು ಜನರ ಮನೆಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Advertisement

ತಾಲೂಕಿನ ಅಲ್ಲೂರ ಬಿ. ಗ್ರಾಮದ ಶ್ರೀನಾಥ ಈಶ್ವರ ನಾಲವಾರ (25), ಪಟ್ಟಣದವರಾದ ಸಾಗರ ಶಾಂತಪ್ಪ ದೊಡ್ಡಮನಿ (22), ಮುಜಾವರ ಚಾಂದ ಮಶಾಕಸಾಬ್‌ ಮುಜಾವರ್‌ (26), ಗುರು ಸಾಯಬಣ್ಣ ಹಕೀಮ್‌ (32), ಅಜೀಮ್‌ ಅಬ್ದುಲ್‌ ರಹೇಮಾನ ಶೇಕ್‌ (26), ಶಾಕೀರ್‌ ಅಬ್ದುಲ್‌ ರಹೇಮಾನ ಶೇಕ್‌ (24), ಯುನೂಸ್‌ ಸರ್ವರ್‌ ಪಟೇಲ್‌ ಕಡಬೂರ (25), ಮನ್ಸೂಫ್‌ ಸರ್ವರ್‌ ಪಟೇಲ್‌ ಕಡಬೂರ (28), ಅಂಬರೀಶ ಲಕ್ಷ್ಮಣ ದೊರೆ (28) ಮೃತಪಟ್ಟ ದುರ್ದೈವಿಗಳು.

ಮುಗಿಲು ಮುಟ್ಟಿದ ಆಕ್ರಂದನ: ಪಟ್ಟಣದ ಜಾಫರ್‌ ಗಂಜ್‌ ಏರಿಯಾದ ಒಂದೇ ಮನೆಯ ಯುನೂಸ್‌ ಸರ್ವರ್‌ ಪಟೇಲ್‌, ಮನಸೂಫ್‌ ಸರ್ವರ್‌ ಪಟೇಲ್‌ ಮೃತಪಟ್ಟಿದ್ದು, ಇವರ ಮನೆಗೆ ಸಾಂತ್ವನ ಹೇಳಲು ಬರುತ್ತಿದ್ದಂತೆ ಮೃತರ ತಾಯಿ, ಪತ್ನಿ ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

ನಮಗೆ ಇನ್ಯಾರು ಗತಿ ಸಾಹೇಬರೆ, ಇರುವ ಮಕ್ಕಳನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ಮದುವೆ ಆಗಿ ಎರಡು ವರ್ಷವೂ ಆಗಿಲ್ಲ. ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಇನ್ನು ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಅಳಲು ತೋಡಿಕೊಂಡರು.

ಅದೇ ಏರಿಯಾದ ಅಜೀಮ್‌ ಶೇಕ್‌, ಶಾಕೀರ್‌ ಶೇಕ್‌ ಎನ್ನುವ ಸಹೋದರರು ಮೃತಪಟ್ಟಿದ್ದು, ಇವರ ಮನೆಗೆ ಸಚಿವರು ಭೇಟಿ ನೀಡಿದಾಗ, ಗೋವಾ ಪ್ರವಾಸಕ್ಕೆ ಹೋಗಬೇಡ ಅಂದಿದ್ವಿ. ಆದ್ರೂ ಹೋಗಿ ಶವವಾಗಿ ಬಂದ್ರು ಎಂದು ಅತ್ತರು. ಇದನ್ನು ಕಂಡು ಸಚಿವರ ಕಣ್ಣಲ್ಲೂ ನೀರು ಜಿನುಗಿತು.

Advertisement

ಅಂಬರೀಶ ಲಕ್ಷ್ಮಣ ದೊರೆ ಮೃತಪಟ್ಟಿದ್ದು, ಇನ್ನೊಬ್ಬ ಸಹೋದರ ಆಕಾಶ ಲಕ್ಷ್ಮಣ ದೊರೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದೇ ಮನೆಯಲ್ಲಿ ಒಬ್ಬ ಸಹೋದರ ಮೃತಪಟ್ಟಿದ್ದು, ಇನ್ನೊಬ್ಬ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮನೆಗೆ ಭೇಟಿ ನೀಡಿದಾಗ ಮದುವೆ ಮಾಡಿ ಎರಡು ವರ್ಷವೂ ಕಳೆದಿಲ್ಲ.

ಒಂದು ಮಗು ಇದೆ. ಇದನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಿ ಎಂದು ಕುಟುಂಬದವರು ಅಂಗಲಾಚಿದರು. ನಂತರ ಆಶ್ರಯ ಕಾಲೋನಿಯ ಸಾಗರ, ಹೋಳಿಕಟ್ಟಾದ ಗುರು, ಬಾಹರಪೇಠದ ಮುಜಾವರ್‌ ಅವರ ಮನೆಗೆ ಭೇಟಿ ನೀಡಿ, ಅಲ್ಲಿಂದ ಅಲ್ಲೂರ ಗ್ರಾಮದ ಶ್ರೀನಾಥ ಅವರ ಮನೆಗೆ ತೆರಳಿದ
ಸಚಿವರು ಸಾಂತ್ವನ ಹೇಳಿದರು. ಈ ವೇಳೆ ಮದುವೆ ಶ್ರೀನಾಥನ ಮದುವೆ ಆಮಂತ್ರಣ ಪತ್ರಿಕೆ ನೀಡಿದ ಕುಟುಂಬದವರು, ಇನ್ನು ಹತ್ತು ದಿನದಲ್ಲಿ ಮದುವೆ ಆಗಬೇಕಿತ್ತು. ಎಲ್ಲರಿಗೂ ಕಾರ್ಡ್‌ ಹಂಚಿದ್ದೇವೆ. ಇದೀಗ ಯಾರ ಮದುವೆ ಮಾಡೋದು ಎಂದು ಅಳಲು ಪ್ರಾರಂಭಿಸಿದರು.

ಎಲ್ಲರ ಅಳಲನ್ನು ಆಲಿಸಿದ ಸಚಿವರು, ಇದೀಗ ನೀತಿ ಸಂಹಿತೆ ಜಾರಿಯಾಗಿದೆ. ಲೋಕಸಭೆ ಚುನಾವಣೆ ಮುಗಿದ ಕೂಡಲೇ ನಿಮಗೆ ಸೂಕ್ತ ರೀತಿಯ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗಣ್ಣಗೌಡ, ಅಜೀಜ ಸೇಠ ರಾವೂರ, ಮುಕ್ತಾರ ಪಟೇಲ್‌, ಜಾಫರ್‌ ಪಟೇಲ್‌ ಕುನ್ನೂರ್‌, ಪಾಶಾ ಖುರೇಶಿ, ಚಂದ್ರಶೇಖರ ಕಾಶಿ, ವಿನೋದ್‌ ಗುತ್ತೇದಾರ, ಶೀಲಾ ಕಾಶಿ, ಶಿವಕಾಂತ ಬೆಣ್ಣೂರಕರ್‌, ಜಫರುಲ್‌ ಹಸನ್‌, ಶರಣು ಡೋಣಗಾಂವ, ಶೇಖ ಬಬು, ಶಿವಾಜಿ ಕಾಶಿ, ವೆಂಕಟೇಶ ಕುಲಕರ್ಣಿ, ಸ್ವಪ್ನಾ ಪಾಟೀಲ, ಹಣಮಂತ ಸಂಕನೂರ, ಭೀಮು ಹೋತಿನಮಡಿ, ಮಲ್ಲಿಕಾರ್ಜುನ ಕಾಳಗಿ, ನಜೀರ ಆಡಕಿ, ನಯೀಮ್‌, ರಫಿಕ್‌, ಮಲೀಕ್‌, ತಿಮ್ಮು ಬೋವಿ ಸಚಿವರ ಜತೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next