ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಂತರ ಸಿಎಂ ಯೋಗಿ ಕೂಡ ನನಗೆ ರಾಷ್ಟ್ರ ಮುಖ್ಯ, ಖರ್ಗೆಗೆ ತುಷ್ಟೀಕರಣ ಮೊದಲು ಎಂದು ತಿರುಗೇಟು ನೀಡಿದ್ದರು. ಅಷ್ಟೇ ಅಲ್ಲ ಮುಸ್ಲಿಮರ ದಾಳಿಗೆ ತಾಯಿ ಬಲಿಯಾಗಿದ್ದರೂ ಕೂಡಾ ಮತಕ್ಕಾಗಿ ಖರ್ಗೆ ಮೌನವಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದರು. ಇದೀಗ ಈ ವಿಚಾರ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾದರೆ ಯೋಗಿ ಆದಿತ್ಯನಾಥ್ ಅವರು ಖರ್ಗೆ ಕುಟುಂಬದ ಕುರಿತ ನೀಡಿದ ಹೇಳಿಕೆಯ ಇತಿಹಾಸವೇನು? ಅಂದು ನಡೆದ ಕರಾಳ ದುರಂತ ಏನು ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ…
ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು?
ಕಾವಿ ವಸ್ತ್ರ ಧರಿಸಿ ಸಾಧುಗಳ ವೇಷದಲ್ಲಿ ಇರುವ ಕೆಲ ವ್ಯಕ್ತಿಗಳು ರಾಜಕೀಯದಲ್ಲಿದ್ದಾರೆ. ಕೆಲವರು ಮುಖ್ಯಮಂತ್ರಿಗಳೂ ಆಗಿದ್ದಾರೆ. ಅವರು ಕೇಸರಿ ವಸ್ತ್ರ ತೊಡುತ್ತಾರೆ ಮತ್ತು ಅವರ ತಲೆಯಲ್ಲಿ ಕೂದಲೂ ಇಲ್ಲ. ನಾನು ಬಿಜೆಪಿಯವರಿಗೆ ಒಂದು ಹೇಳಲು ಬಯಸುತ್ತೇನೆ. ನೀವು ಒಂದೋ ಬಿಳಿಯ ವಸ್ತ್ರ ತೊಡಿ ಅಥವಾ ಸನ್ಯಾಸಿಯಾಗಿದ್ದರೆ ಕೇಸರಿ ವಸ್ತ್ರ ತೊಡಿ. ಆದರೆ ರಾಜಕೀಯದಿಂದ ದೂರವಿರಿ. ಯೋಗಿ ಆದಿತ್ಯನಾಥ್ ಒಬ್ಬ ಕಾವಿ ವೇಷದಲ್ಲಿರುವ ತೋಳ. ಅವರು ಖಾದಿ ಧರಿಸುವುದು ಉತ್ತಮ ಎಂದು ವಾಗ್ದಾಳಿ ನಡೆಸಿದ್ದರು.
ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು!
ಮಲ್ಲಿಕಾರ್ಜುನ್ ಖರ್ಗೆ ಅವರ ಮನೆಯನ್ನು ರಜಾಕಾರರು ಸುಟ್ಟು ಹಾಕಿದ್ದರು. ಅವರ ತಾಯಿ ಬಲಿಯಾಗಿದ್ದರೂ ಕೂಡಾ ಮುಸ್ಲಿಂ ಮತದಾರರ ತುಷ್ಟೀಕರಣಕ್ಕಾಗಿ ಅವರು ಇಂದು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ನನಗೆ ರಾಷ್ಟ್ರ ಮುಖ್ಯ, ಖರ್ಗೆಗೆ ತುಷ್ಟೀಕರಣ ಮೊದಲು ಎಂದು ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ಕೊಟ್ಟಿದ್ದರು.
ಖರ್ಗೆ ಕುಟುಂಬ, ಗ್ರಾಮದ ಮೇಲೆ ರಜಾಕಾರರ ದಾಳಿ-ಅಂದು ನಡೆದಿದ್ದೇನು?
ಬೀದರ್ ನ ಭಾಲ್ಕಿಯ ವಾರ್ವಟ್ಟಿ ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟೂರು. ಹಿಂದೆ ಈ ಊರು ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯವು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿತ್ತು. ಆಗ ಒಂದು ವೇಳೆ ಸ್ವಾತಂತ್ರ್ಯ ಘೋಷಣೆ ಆದರೆ ತನ್ನ ಅಧಿಕಾರ ಹೋಗಿಬಿಡುತ್ತದೆ ಎಂದು ಭಯಪಟ್ಟು ವ್ಯಾಪಕ ಹಿಂಸಾಚಾರಕ್ಕೆ ಆದೇಶಿಸಿದ್ದ.
ಅದರ ಪರಿಣಾಮ 1948ರಲ್ಲಿ ರಜಾಕಾರರು (ನಿಜಾಮನ ಬಂಟರು) ಭಾಲ್ಕಿಯ ವಾರ್ವಟ್ಟಿ ಗ್ರಾಮಕ್ಕೆ ಬೆಂಕಿಹಚ್ಚಿ ಅಟ್ಟಹಾಸಗೈದಿದ್ದರು. ಈ ದುರಂತದಲ್ಲಿ ಖರ್ಗೆ ಅವರ ಮನೆಯೂ ಬೆಂಕಿಗಾಹುತಿಯಾಗಿತ್ತು. ಆಗ ಖರ್ಗೆಯವರು ಏಳು ವರ್ಷದ ಬಾಲಕ! ಅಂದು ಅವರು ಬದುಕಿ ಉಳಿದದ್ದೇ ಒಂದು ಪವಾಡ. ಆದರೆ ಈ ದುರಂತದಲ್ಲಿ ಖರ್ಗೆ ಅವರ ತಾಯಿ, ಸಹೋದರಿಯರು ಹಾಗೂ ಕುಟುಂಬ ಸದಸ್ಯರು ಸುಟ್ಟು ಬೂದಿಯಾಗಿದ್ದರು.
ಪ್ರಿಯಾಂಕ್ ಖರ್ಗೆ ಆಕ್ರೋಶ:
ತನ್ನ ತಂದೆ ಮಲ್ಲಿಕಾರ್ಜುನ್ ಖರ್ಗೆ ಅವರ ಬಾಲ್ಯದ ದುರಂತದ ಬಗ್ಗೆ ಟೀಕಿಸಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1948ರಲ್ಲಿ ಹೈದರಾಬಾದ್ ನಿಜಾಮನ ರಜಾಕಾರರು ನಮ್ಮ ತಂದೆಯ ಮನೆಯನ್ನು ಸುಟ್ಟುಹಾಕಿದ್ದರು. ಆದರೆ ಇಡೀ ಮುಸ್ಲಿಂ ಸಮುದಾಯವನ್ನು ಟೀಕಿಸುವುದು ಸರಿಯಲ್ಲ. ಅಂದು ರಜಾಕಾರರು ಮಾಡಿದ್ದ ದುಷ್ಕೃತ್ಯಕ್ಕೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಪ್ರತಿಯೊಂದು ಸಮುದಾಯದಲ್ಲೂ ಕೆಟ್ಟ ಕೃತ್ಯ ನಡೆಸಿದ ಹಾಗೂ ಕೆಟ್ಟ ಜನರು ಇದ್ದಿರುತ್ತಾರೆ ಎಂಬ ಸಮಜಾಯಿಷಿ ಪ್ರಿಯಾಂಕ್ ಖರ್ಗೆಯವರದ್ದು.