ಕಲಬುರಗಿ: ಹಳಿಗಳಿದ್ದರೂ ಹಾದಿ ತಪ್ಪಿ ರೈಲುಗಳು ಚಲಿಸುತ್ತಿವೆ. ರೈಲು ಓಡಿಸಲಿಕ್ಕೆ ಬಾರದವರು ದೇಶವನ್ನು ಹೇಗೆ ಮುನ್ನೆಡೆಸುತ್ತಾರೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಮಂಗಳವಾರ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಚಿಸಿ ಮುನ್ನೆಡೆದರೆ ರೈಲುಗಳು ಹಾದಿ ತಪ್ಪುತ್ತಿರಲಿಲ್ಲ. ಅದೇ ರೀತಿ ಕೋವಿಡ್-19 ನಿಯಂತ್ರಿಸುವಲ್ಲಿ ಕ್ರಮಬದ್ದವಾದ ನಿರ್ಧಾರಗಳನ್ನು ಕೈಗೊಳ್ಳದ ಪರಿಣಾಮ ಕೋವಿಡ್-19 ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ ಎಂದರು.
ಕೋವಿಡ್-19 ಸೋಂಕು ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಸರಕಾರ ಯಾವುದೇ ತಜ್ಞರ, ಪ್ರಮುಖರ ಅಭಿಪ್ರಾಯ ಪಡೆಯದೇ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದೇ ಕಾರಣವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಯಾವುದೇ ನಿಟ್ಟಿನಲ್ಲಿ ಚರ್ಚಿಸದೇ ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿಗೆ ತಂದಿರುವುದರಿಂದ ಎದುರಾದ ಪರಿಸ್ಥಿತಿ ಅರಿವಿದ್ದರೂ ಕೋವಿಡ್-19 ದಂತಹ ವೈರಸ್ ತಡೆಗಟ್ಟುವಲ್ಲಿ ಸಹ ಹುಡುಗಾಟದಂತೆ ನಡೆದುಕೊಂಡಿರುವ ಪರಿಣಾಮ ಪರಿಸ್ಥಿತಿ ಕೈ ಮೀರಿದೆ. ಈಗಲಾದರೂ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಬೇಕೆಂದರು.
ಪ್ರಧಾನಿಯವರು ಆಗೊಮ್ಮೆ- ಈಗೊಮ್ಮೆ ಟಿವಿಯಲ್ಲಿ ಬಂದು ಪ್ರವಚನ ನೀಡುತ್ತಾರೆ. ಯಾರೊಂದಿಗೆ ಸಮಾಲೋಚನೆ ನಡೆಸದೇ ಏನೇನೋ ಹೇಳುತ್ತಾರೆ. ತದನಂತರ ಎಲ್ಲ ಅಧಿಕಾರ ರಾಜ್ಯಗಳಿಗೆ ಬಿಟ್ಟು ಬಿಡುತ್ತಾರೆ. ಈತ್ತ ರಾಜ್ಯದಲ್ಲಿ ಮುಂಜಾನೆ ಒಂದು ನಿರ್ಧಾರ, ಸಂಜೆ ಮತ್ತೊಂದರ ಕುರಿತಾಗಿ ಆದೇಶ ಹೊರಡಿಸಲಾಗುತ್ತದೆ. ಹೀಗಾಗಿ ಅಧಿಕಾರಿಗಳು ಗೊಂದಲದಲ್ಲಿ ಮುಳುಗಿದ್ದಾರೆ. ಒಟ್ಟಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ದಿಂದ ಸೋಂಕು ನಿಯಂತ್ರಣ ಕ್ಕೆ ಬಾರದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.