Advertisement

ಡಬಲ್ ಇಂಜಿನ್ ಸರ್ಕಾರದಿಂದ  ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ

03:28 PM Aug 04, 2021 | Team Udayavani |

ಕಲಬುರಗಿ: ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ಕಂದಾಯ ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ ಜಿಲ್ಲೆ ಮತ್ತೆ ಕಡೆಗಣಿಸಿರುವುದಕ್ಕೆ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾಗಿರುವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಡಬಲ್‌ಇಂಜಿನ್ ಸರ್ಕಾರದಿಂದ ಜಿಲ್ಲೆಗೆ ಅನ್ಯಾಯ ನಿರಂತರವಾಗಿ ಮುಂದುವರೆದಿದೆ. ಕೇಂದ್ರದಲ್ಲಿ ರಾಜ್ಯದಲ್ಲಿ ಒಂದೇ ಸರಕಾರವಿರುವುದು ಡಬಲ್ ಇಂಜನ್ ಇದ್ದಂತೆ  ಎಂದು ಬಿಜೆಪಿಗರು ಹೇಳುವುದು ಇದೇನಾ? ಎಂದು ಪತ್ರಿಕಾ ಹೇಳಿಕೆಯಲ್ಲಿ ವ್ಯಂಗವಾಡಿದ್ದಾರೆ.

ಬಿಜೆಪಿ ಸರ್ಕಾರ ಮತ್ತೊಮ್ಮೆ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ದೋಖಾ ಮಾಡಿದೆ.‌ ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕಲ್ಯಾಣ‌ ಕರ್ನಾಟಕ ಪ್ರದೇಶಕ್ಕೆ ಅದರಲ್ಲೂ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸದೇ ಅನ್ಯಾಯವೆಸಗಿದ್ದರು. ಈಗ ಅವರ ಉತ್ತರಾಧಿಕಾರಿ ಬೊಮ್ಮಾಯಿ‌ ಅವರು ಕೂಡಾ ಮತ್ತೊಮ್ಮೆ ಈ ಪ್ರದೇಶವನ್ನು ಕಡೆಗಣನೆ ಮಾಡುವ ಮೂಲಕ ಅನ್ಯಾಯದ ಪರಂಪರೆ ಮುಂದುವರೆಸಿಕೊಂಡು ಬರುವಂತಾಗಿದೆ.‌.‌

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಂಟು ಸಚಿವರನ್ನು ಹೊಂದಿದ್ದ ಕಲಬುರಗಿ ಜಿಲ್ಲೆ ಈಗ ಒಬ್ಬರೇ ಒಬ್ಬ ಸಚಿವರನ್ನೂ ಹೊಂದದೆ ಅನಾಥವಾಗಿರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಮತ್ತು ಬಿಜೆಪಿ ಸಂಸದ,  ಶಾಸಕರ ಅಸಹಾಯಕತೆ ಕಾರಣವಾಗಿದೆ.

ಕಳೆದ‌ ಲೋಕಸಭಾ ಚುನಾವಣೆ ವೇಳೆ ಹಿರಿಯ ನಾಯಕ‌  ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ದಿ ಹೊಳೆ ಹರಿಸುವುದಾಗಿ ಹೇಳಿ  ಜನರನ್ನು ಮರುಳು ಮಾಡಿ ಓಟು ಗಿಟ್ಟಿಸಿದ್ದ ಕಲಬುರಗಿ ಜಿಲ್ಲೆಯ ಮಹಾನ್ ನಾಯಕರು ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ ಹಲವಾರು ಯೋಜನೆಗೆಳು ವಾಪಸ್ ಹೋದಾಗ ಧ್ವನಿ ಎತ್ತಲಿಲ್ಲ.

Advertisement

ರಾಜ್ಯ ಸರ್ಕಾರ ಕೆಕೆಆರ್‌ಡಿ‌ಬಿ‌ಗೆ ನಿಗದಿತ ವಾರ್ಷಿಕ ಅನುದಾನ ಬಿಡುಗಡೆ ಮಾಡದಿರುವಾಗ, ನೆರೆಯಿಂದ ಜನರು ತೊಂದರೆಯಲ್ಲಿದ್ದಾಗ ಅವರ ನೆರವಿಗೆ ಧಾವಿಸುವಲ್ಲಿ ವಿಫಲವಾದಾಗ, ಕೊರೋನಾ ಸಾಂಕ್ರಾಮಿಕದಿಂದ ಜಿಲ್ಲೆಯ ಜನರು ಬೆಡ್, ಆಕ್ಸಿಜನ್, ಲಸಿಕೆ, ಅಂಬುಲೆನ್ಸ್ ಕೊರತೆಯಿಂದ ನರಳುತ್ತಿರುವಾಗ ಬೆನ್ನೆಲುಬು ಇಲ್ಲದ ಬಿಜೆಪಿ ಸಂಸದ ಶಾಸಕರು ಸರ್ಕಾರದ ಮೇಲೆ‌ ಒತ್ತಡ ತಂದು ಜನರಿಗೆ ವೈದ್ಯಕೀಯ ನೆರವು ಕೊಡಿಸಲಿಲ್ಲ.

ಈಗ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ನೀಡದಿರುವಾಗಲೂ ಬಾಯಿಬಿಡುತ್ತಿಲ್ಲ . ಹೀಗಿದ್ದ ಮೇಲೆ ಇವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next