Advertisement
ಕಳೆದ ಸಾಲಿನಲ್ಲಿ ತೊಗರಿ ಖರೀದಿಗೆ ಪ್ರೋತ್ಸಾಹ ಧನ ಘೋಷಿಸಿದ್ದ ರಾಜ್ಯ ಸರಕಾರ ಈ ಸಲ ತನ್ನ ನಿರ್ಧಾರಿಂದ ಹಿಂದೆ ಸರಿದಿದ್ದು ರೈತರು ಕೇಂದ್ರ ಸರಕಾರ ನಿಗದಿ ಮಾಡಿದ ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ ಇದು ರಾಜ್ಯ ಸರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ತೋರಿಸುತ್ತಿರುವ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
Related Articles
Advertisement
2019-20 ರ ಸಾಲಿನಲ್ಲಿ ಕೇಂದ್ರದ ರೂ 5,800 ಹಾಗೂ ರಾಜ್ಯದ ಪ್ರೋತ್ಸಾಹ ಧನ ರೂ 375 ಸೇರಿ ಒಟ್ಟು ರೂ 6100 ನಂತೆ ಒಟ್ಟು 1,27,468 ರೈತರಿಂದ 13,01,403.50 ಕ್ವಿಂಟಾಲ್ ತೊಗರಿ ಖರೀದಿಸಲಾಗಿತ್ತು. ಹಾಗೆ ಖರೀದಿಸಿದ ಧಾನ್ಯದ ಮೌಲ್ಯ ಒಟ್ಟು ರೂ 793.86 ಕೋಟಿ ಆಗಿತ್ತು. ಅದರಲ್ಲಿ, ರೂ 590.09 ಕೋಟಿ ಹಣವನ್ನು (ಶೇ 74.33% ರಂತೆ )1,03,408 ರೈತರಿಗೆ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಬಾಕಿ ಉಳಿದ 24,060 ರೈತರಿಗೆ ಹಣ ಬಿಡುಗಡೆ ಮಾಡಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕರ ಮೌನ: ರಾಜ್ಯದಲ್ಲಿ ಕಳೆದ ವರ್ಷದ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ಕಳೆದ ಅಧಿವೇಶನದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಪ್ರೋತ್ಸಾಹಧನ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅದರಂತೆ ಈ ಸಲ ಪ್ರೋತ್ಸಾಹ ಧನ ಘೋಷಣೆಯಾಗಿಲ್ಲ. ಜಿಲ್ಲೆಯಲ್ಲಿ ರೈತರು ಇಷ್ಟೊಂದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ರೈತರ ಪರ ಧ್ವನಿ ಎತ್ತಬೇಕಿದ್ದ ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರು ಮೌನವಾಗಿರುವುದು ನೋಡಿದರೆ ಅವರ ಜನಪರ ಕಾಳಜಿ ಎಂತದ್ದು ಎಂದು ಅರ್ಥವಾಗುತ್ತದೆ. ಇದನ್ನೆಲ್ಲಾ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ರಾಜ್ಯ ಸರಕಾರದ ಧೋರಣೆಯ ವಿರುದ್ದ ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಪರಿಹಾರ ನೀಡುವಲ್ಲಿ ವಿಳಂಬ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ತೊಗರಿ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ ಹಾಗೂ ನೂರಾರು ಮನೆಗಳು ಸಂಪೂರ್ಣ ಹಾಳಾಗಿವೆ. ಆದರೆ ರಾಜ್ಯ ಸರಕಾರ ಹಾನಿಗೊಳಗಾದ ಪ್ರದೇಶಗಳ ಜಂಟಿ ಸರ್ವೆ ಮಾಡಿ ನೊಂದವರಿಗೆ ಪರಿಹಾರ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದರು. ಈ ಸಲ ಸುಮಾರು 32 ಲಕ್ಷ ಟನ್ ತೊಗರಿ ಫಸಲಿನ ನಿರೀಕ್ಷೆ ಮಾಡಲಾಗಿದ್ದು, ಈ ಕೂಡಲೇ ರಾಜ್ಯ ಸರಕಾರ ಪ್ರೋತ್ಸಾಹ ಧನ ಘೋಷಿಸಿ ಕೇಂದ್ರ ಸರಕಾರ ನಿಗದಿಪಡಿಸಿದ ಬೆಲೆಗೆ ಸೇರಿಸಿ ತೊಗರಿ ಖರೀದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:“ಬಫೂನ್, ಭಿಕ್ಷುಕ, ಹರಕುಬಾಯಿ…” ವಿಶ್ವನಾಥ್ ವಿರುದ್ಧ ಸಾ.ರಾ.ಮಹೇಶ್ ಟೀಕಾ ಪ್ರಹಾರ
ರೈತವಿರೋಧಿ ನೀತಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ರೈತ ವಿರೋಧಿ ನೀತಿಯನ್ನು ಮುಂದುವರೆಸಿದ್ದು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸದೆ ದಮನಕಾರಿ ಕಾಯಿದೆಗಳ ಮೂಲಕ ಅವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿವೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಹೊರಗಡೆ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಅನುವು ಮಾಡಿಕೊಟ್ಟರೆ ಸರಕಾರದ ಯಾವುದೇ ನಿಯಂತ್ರವಿಲ್ಲದ ವ್ಯಾಪಾರಸ್ಥರ ಬಡ ರೈತರನ್ನು ಶೋಷಿಸಿ ತಮಗಿಷ್ಟವಾದ ಬೆಲೆಗೆ ಬೆಳೆ ಖರೀದಿ ಮಾಡುವ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಾರೆ. ಇದು ರೈತರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.