Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 45.1 ಓವರ್‌ಗಳಲ್ಲಿ 164ಕ್ಕೆ ಕುಸಿದರೆ, ಭಾರತ 41.4 ಓವರ್‌ಗಳಲ್ಲಿ 2 ವಿಕೆಟಿಗೆ 165 ರನ್ ಬಾರಿಸಿತು. ಇದು ವನಿತಾ ಏಕದಿನ ಚಾಂಪಿಯನ್‌ಶಿಪ್ ಸರಣಿಯಾಗಿದ್ದು, ಇತ್ತಂಡಗಳ ನಡುವೆ ಒಟ್ಟು 3 ಪಂದ್ಯ ನಡೆಯಲಿದೆ.
ಪ್ರವಾಸಿಗರ ಕುಸಿತದಲ್ಲಿ ಭಾರತದ ಸಾಂ ಕ ಬೌಲಿಂಗ್ ಆಕ್ರಮಣ ಪ್ರಮುಖ ಪಾತ್ರ ವಹಿಸಿತು. ಜೂಲನ್ ಗೋಸ್ವಾಮಿ (33ಕ್ಕೆ 3), ಏಕ್ತಾ ಬಿಷ್ಟ್ (8ಕ್ಕೆ 2), ಪೂನಂ ಯಾದವ್ (33ಕ್ಕೆ 2) ಮತ್ತು ಶಿಖಾ ಪಾಂಡೆ (38ಕ್ಕೆ 2) ಅಮೋಘ ಪ್ರದರ್ಶನ ನೀಡಿದರು. ಮರಿಜಾನ್ ಕಾಪ್ ಮಾತ್ರ ಬ್ಯಾಟಿಂಗ್ ಹೋರಾಟವೊಂದನ್ನು ನಡೆಸಿ 54 ರನ್ ಹೊಡೆದರು (64 ಎಸೆತ, 6 ಬೌಂಡರಿ). ಕೇವಲ 3 ಟಿ20 ಪಂದ್ಯಗಳನ್ನಾಡಿದ, ಜೈಪುರದ 23ರ ಹರೆಯದ ಪ್ರಿಯಾ ಪೂನಿಯಾ ಕೊಡುಗೆ 124 ಎಸೆತಗಳಿಂದ ಅಜೇಯ 75 ರನ್ (8 ಬೌಂಡರಿ). ಜತೆಗಾತಿ ಜೆಮಿಮಾ ರೋಡ್ರಿಗಸ್ ಕೂಡ ಅಮೋಘ ಬ್ಯಾಟಿಂಗ್ ನಡೆಸಿ 65 ಎಸೆತಗಳಿಂದ 55 ರನ್ ಹೊಡೆದರು (7 ಬೌಂಡರಿ). ಇದು ಜೆಮಿಮಾ ಅವರ 2ನೇ ಅರ್ಧ ಶತಕ. ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 20.4 ಓವರ್‌ಗಳಿಂದ 83 ರನ್ ಒಟ್ಟುಗೂಡಿತು. ಪೂನಂ ರಾವತ್ 16, ನಾಯಕಿ ಮಿಥಾಲಿ ರಾಜ್ ಅಜೇಯ 11 ರನ್ ಮಾಡಿದರು.