Advertisement

ಹಳೆ ಬಿಲ್ಲೇ ಬಾಕಿ ಇದೆ, ಈಗ ಮತ್ತೆ ಕೇಳುತ್ತಿದ್ದಾರೆ

01:56 PM Apr 06, 2018 | Team Udayavani |

ಮಂಗಳೂರು: ರಾಜ್ಯದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಯಾವುದೇ ಹೊತ್ತಿನಲ್ಲಿಯೂ ಟ್ಯಾಕ್ಸಿ ಸೇರಿದಂತೆ ವಾಣಿಜ್ಯ ಬಳಕೆ ಖಾಸಗಿ ವಾಹನಗಳನ್ನು ಸಾರಿಗೆ ಇಲಾಖೆ ವಶಕ್ಕೆ ಪಡೆಯಬಹುದಾಗಿದೆ. ಆದರೆ ಈ ಹಿಂದೆ ಇಲಾಖೆಯು ಹೀಗೆ ಖಾಸಗಿ ವಾಹನಗಳನ್ನು ಬಳಕೆ ಮಾಡಿಕೊಂಡಿದ್ದರೂ ವಾಹನ ಮಾಲಕರಿಗೆ ಬಾಡಿಗೆ ಹಣವನ್ನು ಇನ್ನೂ ಪಾವತಿಸಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆ ಓಡಾಟಗಳಿಗೆ ತಮ್ಮ ವಾಹನಗಳನ್ನು ಒಪ್ಪಿಸುವುದಕ್ಕೆ ವಾಹನ ಮಾಲಕರು ಹಿಂದೇಟು ಹಾಕುತ್ತಿದ್ದಾರೆ.

Advertisement

ಚುನಾವಣೆ ಸಂದರ್ಭ ಮಾತ್ರವಲ್ಲದೆ ಆಗಮಿಸುವ ಗಣ್ಯರ ಭದ್ರತೆ, ಪಲ್ಸ್‌ ಪೊಲಿಯೋ ಮತ್ತಿತರ ಸರಕಾರಿ ತುರ್ತು ಸೇವೆ ಸಂದರ್ಭಗಳು ಒದಗಿದಾಗ ವಾಣಿಜ್ಯ ಬಳಕೆಯ ಖಾಸಗಿ ಕಾರು, ಟ್ಯಾಕ್ಸಿ, ಬಸ್‌ ಮುಂತಾದ ವಾಹನಗಳನ್ನು ಸಾರಿಗೆ ಪ್ರಾಧಿಕಾರದ ಮೂಲಕ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಬಳಸಿಕೊಳ್ಳುತ್ತಾರೆ. ಈ ರೀತಿ ವಶಕ್ಕೆ ಪಡೆದುಕೊಳ್ಳುವ ವಾಹನಗಳಿಗೆ ಸರಕಾರದ ಮಾರ್ಗಸೂಚಿ ಅನುಸಾರ ಬಾಡಿಗೆ ನೀಡಬೇಕೆಂಬ ನಿಯಮವಿದೆ. ಆದರೆ ದ. ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಅನೇಕ ಕೆಲಸಕಾರ್ಯಗಳಿಗೆ ಖಾಸಗಿ ವಾಹನಗಳನ್ನು ಬಳಕೆ ಮಾಡಿಕೊಂಡಿದ್ದರೂ ಇನ್ನೂ ಬಾಡಿಗೆ ಹಣ ಪಾವತಿ ಮಾಡಿಲ್ಲ. ವಾಹನ ಮಾಲಕರು ಬಾಡಿಗೆ ನೀಡುವಂತೆ ಪೊಲೀಸರು ಮತ್ತು ಇತರ ಸರಕಾರಿ ಅಧಿಕಾರಿಗಳ ಬಳಿ ಅಂಗಲಾಚಿ ಬಸವಳಿದಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈಗ ಚುನಾವಣೆ ಸಂದರ್ಭ ತಮ್ಮ ವಾಹನಗಳನ್ನು ಸರಕಾರಿ ಬಳಕೆಗೆ ಒದಗಿಸುವುದಕ್ಕೆ ಜಿಲ್ಲೆಯ ಖಾಸಗಿ ವಾಣಿಜ್ಯ ವಾಹನ ಮಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ತಿಂಗಳುಗಳಷ್ಟು ಹಿಂದಿನ ಬಾಕಿ ಬಿಲ್‌ ಅನ್ನು ನೀಡದೆ ಪೊಲೀಸ್‌ ಇಲಾಖೆ ಸತಾಯಿಸುತ್ತಿದೆ. ಅಲ್ಲದೆ ಈ ಬಾರಿ ಚುನಾವಣೆ ನೆಪದಲ್ಲಿ ಕಳೆದ ಒಂದು ತಿಂಗಳಿನಿಂದ ಈಚೆಗೆ ಬಲವಂತವಾಗಿ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಆರೋಪಿಸಿದೆ.

ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ 2016ರ ನ. 8ರಂದು ನಮ್ಮ ಸಂಘಕ್ಕೆ ಸೇರಿರುವ ಕೆಲವು ಟ್ಯಾಕ್ಸಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಳಸಿಕೊಂಡಿದ್ದರು. ಆದರೆ ಅದರ ಬಾಡಿಗೆ ಬಿಲ್‌ ಇನ್ನೂ ಪಾವತಿಸಿಲ್ಲ. ಅಲ್ಲದೆ ಇತ್ತೀಚೆಗೆ ಪ್ರಧಾನಿ ಮೋದಿ, ರಾಹುಲ್‌ ಗಾಂಧಿ, ಅಮಿತ್‌ ಶಾ ಜಿಲ್ಲೆಗೆ ಭೇಟಿ ನೀಡಿದ್ದಾಗಲೂ ನಮ್ಮ ಕೆಲವು ವಾಹನಗಳನ್ನು ಬಳಕೆ ಮಾಡಿಕೊಂಡಿದ್ದು, ಅದರ ಬಿಲ್‌ ಕೂಡ ಪಾವತಿಯಾಗಿಲ್ಲ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದಿನಿಂದಲೇ ಹಲವು ಮಾದರಿಯ ವಾಹನಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ. ಹೀಗಾದರೆ ನಾವು ಜೀವನ ನಿರ್ವಹಿಸುವುದು ಹೇಗೆ ಎಂದು ದ. ಕ. ಟ್ಯಾಕ್ಸಿ ಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಸಂಘಟನ ಕಾರ್ಯದರ್ಶಿ ಆನಂದ್‌ ಕೆ. ‘ಉದಯವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಬಲವಂತವಾಗಿ ವಶ
ಯಾವುದೇ ತುರ್ತು ಸಂದರ್ಭಗಳಲ್ಲಿಯೂ ನಮ್ಮ ವಾಹನಗಳನ್ನು ಸರಕಾರಿ ಸೇವೆಗಳಿಗೆ ಒದಗಿಸುವುದಕ್ಕೆ ಸಿದ್ಧರಿದ್ದೇವೆ. ಆದರೆ ನಿಯಮಾನುಸಾರ ಬಾಡಿಗೆಯನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಅದುಬಿಟ್ಟು ಏಕಾಏಕಿ ವಾಹನಗಳನ್ನು ರಸ್ತೆಯಲ್ಲೇ ಪೊಲೀಸರು ವಶಕ್ಕೆ ಪಡೆದುಕೊಂಡು ಅನಂತರ ಬಾಡಿಗೆಯನ್ನೂ ನೀಡದೆ ಸತಾಯಿಸುವುದು ಸರಿಯಲ್ಲ’ ಎಂದು ಟ್ಯಾಕ್ಸಿ ವಾಹನ ಮಾಲಕರೊಬ್ಬರು ಹೇಳಿದ್ದಾರೆ.

ಎಪ್ರಿಲ್‌, ಮೇ ಬಾಡಿಗೆ ಹೆಚ್ಚು
ಈ ಹಿಂದೆ ಚುನಾವಣೆಗಳಿಗಾಗಿ ಒಂದು ವಾರ ಕಾಲ ಮಾತ್ರ ಖಾಸಗಿ ವಾಹನಗಳನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ಒಂದು ತಿಂಗಳ ಕಾಲ ವಾಹನ ನೀಡಬೇಕು ಎಂದು ತಿಳಿಸಿದ್ದಾರೆ. ಎಪ್ರಿಲ್‌ -ಮೇಯಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ, ಸಮಾರಂಭಗಳ ಕಾಲ, ಹೀಗಾಗಿ ಬಾಡಿಗೆ ಹೆಚ್ಚು ಇರುತ್ತದೆ. ನಮಗೆ ನಷ್ಟ ಉಂಟಾಗುತ್ತದೆ ಎಂಬುದು ಟ್ಯಾಕ್ಸಿ ಮಾಲಕರ ನೋವು.

Advertisement

ಮೋದಿ ಭೇಟಿ ಬಿಲ್‌ ಇನ್ನೂ ಬಾಕಿ
ಅ. 29ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನಿ ಮೋದಿ ಅವರ ಭದ್ರತೆ ದೃಷ್ಟಿಯಿಂದ ಪೊಲೀಸರು ಬಳಸಿದ್ದ ವಾಹನದ ಬಿಲ್‌ ಈವರೆಗೆ ಪಾವತಿಯಾಗಿಲ್ಲ. ಅಸೋಸಿಯೇಶನ್‌ ಅಧ್ಯಕ್ಷ ಪ್ರಮೋದ್‌ ಕುಮಾರ್‌ ಉಳ್ಳಾಲ್‌ ಅವರ ಇನೋವಾ ಕಾರನ್ನು ಆ ಸಂದರ್ಭದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಈವರೆಗೆ ಅದರ ಬಿಲ್‌ ಪ್ರಮೋದ್‌ ಅವರಿಗೆ ಲಭಿಸಿಲ್ಲ .

ಬಲವಂತ ಬೇಡ
‘ಅಸೋಸಿಯೇಶನ್‌ನಲ್ಲಿ ಜಿಲ್ಲೆಯಾದ್ಯಂತ 1,650 ಸದಸ್ಯರಿದ್ದಾರೆ. ಇದರಲ್ಲಿ ಬಹುತೇಕ ಮಂದಿಗೆ ಬಿಲ್‌ ಬಾಕಿ ಸಮಸ್ಯೆ ಎದುರಾಗಿದೆ. ಅಲ್ಲದೆ ಎಲ್ಲೆಂದರಲ್ಲಿ ಅಡ್ಡಹಾಕಿ ವಾಹನ ವಶಕ್ಕೆ ಪಡೆಯುತ್ತಾರೆ. ಇದು ಸರಿಯಲ್ಲ. ಚುನಾವಣಾ ಕೆಲಸಗಳಿಗಾಗಿ ಕೆಲವು ದಿನಗಳ ವರೆಗೆ ವಾಹನ ಬಳಸುವಂತಾಗಬೇಕು. ತಿಂಗಳುಗಟ್ಟಲೆ ವಶಪಡಿಸಿಕೊಂಡರೆ ಕಷ್ಟವಾಗುತ್ತದೆ. ನೀಡಬೇಕಾದ ಬಾಡಿಗೆ ಮೊತ್ತವನ್ನು ಚುನಾವಣಾ ಕರ್ತವ್ಯದ ದಿನದ ಅಂತ್ಯದಲ್ಲಿ ಕೊಡಬೇಕು.
– ಆನಂದ್‌ ಕೆ., ಸಂಘಟನ ಕಾರ್ಯದರ್ಶಿ, ದ.ಕ. ಟ್ಯಾಕ್ಸಿಮೆನ್ಸ್‌  ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌

ಈ ಹಿಂದೆ ತುರ್ತು ಕಾರ್ಯಗಳಿಗೆ ಬಳಸಿದ ವಾಹನಗಳ ಬಿಲ್‌ಗ‌ಳನ್ನು ಪಾವತಿಸಲಾಗಿದೆ. ಆದರೆ ಕೆಲವು ಸಣ್ಣ ಪುಟ್ಟ ಬಿಲ್‌ಗ‌ಳು ಬಾಕಿ ಇವೆ. ಅವುಗಳನ್ನು ಶೀಘ್ರವೇ ನೀಡಲಾಗುವುದು. 
– ಟಿ.ಆರ್‌. ಸುರೇಶ್‌, ಪೊಲೀಸ್‌ ಆಯುಕ್ತರು, ಮಂಗಳೂರು

— ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next