Advertisement

ರಾಜ್ಯದಲ್ಲೂ ಹಳಿಯೇರಲಿದೆ ಖಾಸಗಿ ರೈಲು; ಮಾರ್ಗ ನಿಗದಿ ಪರಾಮರ್ಶೆ ಪ್ರಕ್ರಿಯೆ ಆರಂಭ

10:45 AM Jul 28, 2020 | mahesh |

ಮಹಾನಗರ: ರಾಜ್ಯದಲ್ಲಿ ಖಾಸಗಿ ರೈಲು ಓಡಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳು ಆರಂಭಗೊಂಡಿವೆ. ಯಾವ ಮಾರ್ಗಗಳಲ್ಲಿ ಮೊದಲ ರೈಲು ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಕುರಿತಾಗಿ ಪರಾಮರ್ಶೆ ಇಲಾಖೆಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲಿಯೇ ಇದಕ್ಕೆ ಸಂಬಂ ಧಿಸಿದಂತೆ ಟೆಂಡರ್‌ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ. ರೈಲ್ವೇ ಇಲಾಖೆಯು ನಿಗದಿಪಡಿಸುವ ಮಾರ್ಗಗಳಲ್ಲಿ ಖಾಸಗಿ ರೈಲು ಓಡಿಸಲು ಆಸಕ್ತಿ ಇರುವ ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಿ, ಆಯ್ಕೆಯಾಗಲಿದ್ದಾರೆ. ಪ್ರಯಾಣಿಕರು ಹಾಗೂ ರೈಲ್ವೇಗೆ ಲಾಭ ಆಗುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಿಕೊಂಡು ಈ ಪ್ರಕ್ರಿಯೆ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು 2023ರ ಎಪ್ರಿಲ್‌ ವೇಳೆಗೆ ರಾಜ್ಯದಲ್ಲಿಯೂ ಖಾಸಗಿ ರೈಲು ಸಂಚಾರ ಹಳಿ ಏರುವ ಗುರಿ ಇರಿಸಲಾಗಿದೆ.

Advertisement

ಸದ್ಯದ ಮಾಹಿತಿ ಪ್ರಕಾರ, ಬೆಂಗಳೂರಿ ನಿಂದ ಹೊಸದಿಲ್ಲಿ, ಪಟ್ನಾ ಸಹಿತ ದೇಶದ ವಿವಿಧ ಕಡೆಗಳಿಗೆ ತೆರಳುವ ಸುಮಾರು ಹತ್ತು ಮಾರ್ಗಗಳಲ್ಲಿ ಖಾಸಗಿ ರೈಲಿಗೆ ಅವಕಾಶ ನೀಡುವ ಸಂಬಂಧ ಮಾತುಕತೆ ನಡೆಯುತ್ತಿದೆ. ಉಳಿದಂತೆ ರಾಜ್ಯದೊಳಗೆ ಮೈಸೂರು-ಬೆಂಗಳೂರು, ಹುಬ್ಬಳ್ಳಿ-ಬೆಂಗಳೂರು, ಮಂಗಳೂರು- ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ಬಗ್ಗೆಯೂ ಪರಾಮರ್ಶೆ ನಡೆಯುತ್ತಿದೆ. ಜತೆಗೆ ಮಂಗಳೂರಿನಿಂದ ಕೊಯಮತ್ತೂರು ಮೂಲಕ ಚೆನ್ನೈಗೂ ಖಾಸಗಿ ರೈಲಿಗೆ ಅವಕಾಶ ನೀಡುವ ಬಗ್ಗೆ ಚಿಂತನೆಯಿದೆ.

ಗಂಟೆಗೆ 160 ಕಿ.ಮೀ. ವೇಗ
ಈ ಖಾಸಗಿ ರೈಲಿನಲ್ಲಿ ಒಟ್ಟು 16 ಕೋಚ್‌ಗಳು ಇರಲಿವೆ. ಪ್ರತೀ ರೈಲಿನ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ.ಗೆ ನಿಗದಿಗೊಳಿಸಲಾಗಿದೆ. ಯಾವುದೇ ಖಾಸಗಿ ಕಂಪೆನಿಯು ರೈಲ್ವೇ ಇಲಾಖೆಯ ಜತೆಗೆ ಮಾಡಿಕೊಳ್ಳುವ ಒಪ್ಪಂದಕ್ಕೆ 35 ವರ್ಷಗಳ ಕಾಲಾವಧಿ ಇರಲಿದೆ. ಪ್ರತೀ ರೈಲಿನ ಓಡಾಟಕ್ಕೆ ತಕ್ಕಂತೆ ಮಾರ್ಗ ಬಳಕೆ ಶುಲ್ಕ, ಇಂಧನ ಶುಲ್ಕವನ್ನು ಪಾವತಿಸಲಿದೆ. ಈ ರೈಲುಗಳನ್ನು ಓಡಿಸುವ ಚಾಲಕ/ಗಾರ್ಡ್‌ಗಳು ರೈಲ್ವೇ ಇಲಾಖೆಯವರೇ ಆಗಿರುತ್ತಾರೆ.

ದೇಶದ ಮೊದಲ ಖಾಸಗಿ “ತೇಜಸ್‌’ ರೈಲು ಹೊಸದಿಲ್ಲಿ ಹಾಗೂ ಲಕ್ನೋ ನಡುವೆ ಕಳೆದ ವರ್ಷ ಅ. 4ರಿಂದ ಸಂಚಾರ ಆರಂಭಿಸಿದೆ. ಈ ಎಕ್ಸ್‌ಪ್ರೆಸ್‌ ರೈಲು ಎಲ್ಲ ಹವಾನಿಯಂತ್ರಿತವಾಗಿದ್ದು, ಶತಾಬ್ಧಿ ಎಕ್ಸ್‌ ಪ್ರಸ್‌ನ ಹಾಗೂ ಐಷಾರಾಮಿ ರೈಲಿನ ಎಲ್ಲ ಸೌಲಭ್ಯ ಒಳಗೊಂಡಿರುತ್ತದೆ. ಬಯೋ ಟಾಯ್ಲೆಟ್‌ ಹಾಗೂ ಪ್ರವೇಶ- ನಿರ್ಗಮನಕ್ಕಾಗಿ ಸ್ವಯಂ ಚಾಲಿತ ಸ್ಲೆ„ಡಿಂಗ್‌ ಬಾಗಿಲು ವ್ಯವಸ್ಥೆಯಿದೆ. ಸಿಸಿಟಿವಿ ಕೆಮರಾ, ಎಲ್‌ಇಡಿ ಟಿವಿ, ನಿಯತಕಾಲಿಕ ಇನ್ನಿತರ ಸೌಲಭ್ಯವೂ ಇವೆ.

14 ಮಾರ್ಗಗಳಲ್ಲಿ ನಿರೀಕ್ಷೆ
ರಾಜ್ಯದ 14 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ರೈಲ್ವೇ ಸೇವೆ ನೀಡಲು ಯೋಚಿಸಲಾಗಿದೆ. ಈ ಮಾರ್ಗಗಳಲ್ಲಿ ಈಗಾಗಲೇ ರೈಲು ಸಂಚರಿಸುತ್ತಿದ್ದರೂ ಕೂಡ ಹೆಚ್ಚುವರಿಯಾಗಿ ಖಾಸಗಿ ರೈಲು ಸೇವೆಗೆ ಈ ಮಾರ್ಗವನ್ನು ನೀಡುವ ಕುರಿತು ಪರಾಮರ್ಶೆ ನಡೆಯುತ್ತಿದೆ. ಇಂಡಿಗೋ, ವಿಸ್ತಾರ, ಸ್ಪೈಸ್‌ಜೆಟ್‌, ಅದಾನಿ, ಮೇಕ್‌ ಮೈ ಟ್ರಿಪ್‌ ಸಹಿತ ಹಲವು ಕಂಪೆನಿಗಳು ರೈಲು ಸೇವೆ ಒದಗಿ ಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

Advertisement

ಅಂತಿಮವಾಗಿಲ್ಲ; ಪರಾಮರ್ಶೆ ನಡೆಯುತ್ತಿದೆ
ಕರ್ನಾಟಕದ ಯಾವ ರೈಲ್ವೇ ಮಾರ್ಗಗಳಲ್ಲಿ ಖಾಸಗಿ ರೈಲು ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಪ್ರಯಾಣಿಕರಿಗೆ ಹಾಗೂ ರೈಲ್ವೇಗೆ ಲಾಭವಾಗುವ ನಿಟ್ಟಿನಲ್ಲಿ ರಾಜ್ಯದ ಹಲವು ಮಾರ್ಗಗಳ ಸಾಧ್ಯತೆಗಳ ಬಗ್ಗೆ ಪರಾಮರ್ಶೆ ನಡೆಯುತ್ತಿದೆ. ಅಂತಿಮವಾಗಿ ರೈಲ್ವೇ ಇಲಾಖೆಯು ಟೆಂಡರ್‌ ಆಹ್ವಾನಿಸಲಿದೆ. ಆ ಬಳಿಕ ಪ್ರಕ್ರಿಯೆಗಳು ನಡೆಯಲಿವೆ.
 - ಸುರೇಶ್‌ ಅಂಗಡಿ, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next