Advertisement

Udupi: ಕರಾವಳಿ ಭತ್ತಕ್ಕೆ ಖಾಸಗಿ ಬೆಂಬಲ ಬೆಲೆ! ಅಕ್ಕಿ ಮಿಲ್‌ ಜತೆ ಜಿಲ್ಲಾಡಳಿತ ಮಧ್ಯಸ್ಥಿಕೆ

12:02 AM Nov 07, 2024 | Team Udayavani |

ಉಡುಪಿ: ಸರಕಾರ ಘೋಷಿಸಿರುವ ಬೆಂಬಲ ಬೆಲೆಯಷ್ಟೇ ದರ ನೀಡಿ ಸ್ಥಳೀಯ ಖಾಸಗಿ ರೈಸ್‌ ಮಿಲ್‌ಗ‌ಳ ಮಾಲಕರು ರೈತರಿಂದ ಭತ್ತ ಖರೀದಿಸಲು ಮುಂದಾಗಿರುವುದರಿಂದ ಈ ಬಾರಿ ಕರಾವಳಿಯ ರೈತರು ಸರಕಾರದ ಖರೀದಿ ಕೇಂದ್ರಕ್ಕಾಗಿ ಕಾಯುವ ಪರಿಸ್ಥಿತಿ ಇಲ್ಲ.

Advertisement

ಕರಾವಳಿಯುದ್ದಕ್ಕೂ ಭತ್ತ ಕಟಾವು ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯ ಸರಕಾರದಿಂದ ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ ಬಂದಿದ್ದರೂ ಖರೀದಿ ಪ್ರಕ್ರಿಯೆ 2025ರ ಜ. 1ರಿಂದ ಆರಂಭವಾಗುವುದರಿಂದ ರೈತರಿಗೆ ಇದು ಊಟಕ್ಕಿಲ್ಲದ ಉಪ್ಪಿನಕಾಯಿಯೇ ಸರಿ. ಆದರೆ ಜಿಲ್ಲಾಡಳಿತವು ರೈತರು ಹಾಗೂ ರೈಸ್‌ ಮಿಲ್‌ ಮಾಲಕರ ನಡುವೆ ನಡೆಸಿದ ಮಾತುಕತೆಯ ಫ‌ಲವಾಗಿ ಬೆಂಬಲ ಬೆಲೆಯಷ್ಟೇ ದರದಲ್ಲಿ ಭತ್ತ ಖರೀದಿಗೆ ಮಿಲ್‌ ಮಾಲಕರು ಒಪ್ಪಿಗೆ ಸೂಚಿಸಿದ್ದು, ರೈತರು ಕೂಡ ಈ ದರಕ್ಕೆ ಭತ್ತ ನೀಡುವ ಸಾಧ್ಯತೆ ಇದೆ.

ಕಳೆದ ಅನೇಕ ವರ್ಷದಿಂದಲೂ ರೈತರು ಭತ್ತ ಮಾರಾಟ ಸಂದರ್ಭದಲ್ಲಿ ಈ ಸಮಸ್ಯೆ ಎದುರಿಸುತ್ತಿದ್ದು ಒಂದು ಕೆ.ಜಿ. ಭತ್ತಕ್ಕೆ 18ರೂ.ಗಳಿಂದ 22 ರೂ.ಗಳವರೆಗೂ ನೀಡಿದ್ದುಂಟು. ಈ ಬಾರಿ ಸರಕಾರ ನಿಗದಿಪಡಿಸಿದಷ್ಟೆ ಬೆಲೆ ಸಿಗುತ್ತಿರುವುದು ಕೊಂಚ ಸಮಾಧಾನ ತರಬಹುದು.

ಉಡುಪಿಯಲ್ಲಿ ಸುಮಾರು 36 ಸಾವಿರ ಹೆಕ್ಟೇರ್‌ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 9,500 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಲಾಗಿತ್ತು.

ಸರಕಾರಿ ಖರೀದಿ ಕೇಂದ್ರ ಯಾಕೆ?
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋ ಬರ್‌ ಅಂತ್ಯ ಹಾಗೂ ನವೆಂಬರ್‌ 15ರ ಒಳಗೆ ಕಟಾವು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಮತ್ತು ಇದೇ ವೇಳೆ ಮಾರಾಟ ಪ್ರಕ್ರಿಯೆ ನಡೆ ಯುತ್ತದೆ. ಈಗ ರೈತರು ಯಂತ್ರದ ಮೂಲಕ ಕಟಾವು ಮಾಡಿ ಸು ವುದರಿಂದ ಒಂದೇ ದಿನದಲ್ಲಿ ಪೂರ್ಣಗೊಳ್ಳುತ್ತದೆ. ಸರಕಾರ ಪ್ರತೀ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವುದರಿಂದ ಕರಾವಳಿ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ರಾಜ್ಯಕ್ಕೆ ಅನ್ವಯಿಸುವಂತೆ ಭತ್ತ ಖರೀದಿ ಕೇಂದ್ರವನ್ನು ಕರಾವಳಿಯಲ್ಲಿ ತೆರೆದರೆ ಯಾವುದೇ ಪ್ರಯೋ ಜನವಿಲ್ಲ. ಇಲ್ಲಿಗೆ ಪ್ರತ್ಯೇಕವಾಗಿ ಕಟಾವು ಸಂದರ್ಭದಲ್ಲೇ ಖರೀದಿ ಕೇಂದ್ರ ತೆರೆಯಬೇಕು ಎನ್ನುತ್ತಾರೆ ರೈತರು.

Advertisement

ಸಂಗ್ರಹ ವ್ಯವಸ್ಥೆಯಿಲ್ಲ
ಹಿಂದೆಲ್ಲ ಭತ್ತವನ್ನು ಮನೆಯ ಎದುರು ತಿರಿಕಟ್ಟಿ ಅದ ರೊಳಗೆ ಸಂಗ್ರಹ ಮಾಡಲಾಗುತ್ತಿತ್ತು. ಈಗ ಈ ಪದ್ಧತಿ ಕಡಿಮೆ. ಹಾಗೆಯೇ ಭತ್ತವನ್ನು ಒಣಗಿ ಸಲು ಹಾಗೂ ಸಂಗ್ರಹಿಸಲು ಬೇಕಾದ ವ್ಯವಸ್ಥೆಯೂ ಇಲ್ಲ. ಮಳೆ ಬಂದರೆ ಇನ್ನಷ್ಟು ತೊಂದರೆ ಆಗಬಹುದು ಎಂಬ ಕಾರಣಕ್ಕೆ ಕಟಾವು ಆದ ತತ್‌ಕ್ಷಣವೇ ಮಾರಾಟ ಮಾಡಲಾಗುತ್ತದೆ.

ಒಣಗಿಸಿದ ಭತ್ತಕ್ಕೆ ಬಂಗಾರದ ಬೆಲೆ
ಭತ್ತ ಒಣಗಿಸಿ ನೀಡಿದರೆ ಉತ್ತಮ ಬೆಲೆ ಬರುತ್ತದೆ. ಪೂರ್ಣ ಒಣಗಿದ ಭತ್ತಕ್ಕೆ ಬೇಡಿಕೆ ಹೆಚ್ಚು. ಅದನ್ನು ಬೀಜವಾಗಿಯೂ ಬಳಸುತ್ತಾರೆ. ಈಗ ಕಟಾವಾದ ತತ್‌ಕ್ಷಣವೇ ಮಿಲ್‌ಗ‌ಳಿಗೆ ನೀಡಲಾಗುತ್ತದೆ. ಕ್ವಿಂಟಾಲ್‌ಗೆ 2,300 ರೂ. ನೀಡುತ್ತಿದ್ದಾರೆ. ಒಂದು ಅಥವಾ 2 ತಿಂಗಳು ಒಣಗಿಸಿ ನೀಡಿದರೆ ಇದೇ ಭತ್ತಕ್ಕೆ 2,600ರಿಂದ 2,700 ರೂ. ತನಕವೂ ಬೆಲೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ತಜ್ಞರು.

ಕಟಾವು ದುಬಾರಿ
ಕೃಷಿ ಇಲಾಖೆಯಿಂದ ಕಟಾವಿಗೆ ಅನುಕೂಲ ಆಗುವಂತೆ ಹೋಬಳಿಗೆ ಒಂದು ಅಥವಾ ಎರಡು ಯಂತ್ರ ಇಡ ಲಾಗಿದೆ. ಇದರ ಬಾಡಿಗೆ ಶುಲ್ಕ ಕಡಿಮೆ. ಗಂಟೆಗೆ 1,700ರಿಂದ 1800 ರೂ.ಗೆ ಲಭಿಸುತ್ತದೆ. ಆದರೆ ಖಾಸಗಿಯವರು 2,400ರಿಂದ 2,500 ರೂ.ಗಳನ್ನು ಗಂಟೆಗೆ ನಿಗದಿ ಮಾಡಿದ್ದಾರೆ. ಯಂತ್ರ ಗಳ ಕೊರತೆ ಇರುವುದರಿಂದ ರೈತರಿಗೆ ದುಬಾರಿ ಬೆಲೆ ತೆತ್ತು ಕಟಾವು ಮಾಡಿ ಸು ವುದು ಅನಿ ವಾರ್ಯ ಎಂಬಂತಾಗಿದೆ.

ಬೆಂಬಲ ಬೆಲೆಯಷ್ಟೇ
ಖಾಸಗಿ ಖರೀದಿ ದರ
ಕೇಂದ್ರ ಸರಕಾರವು ಕ್ವಿಂಟಾಲ್‌ಗೆ 2,300 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಸರಕಾರದ ಭತ್ತ ಖರೀದಿ ಕೇಂದ್ರದಲ್ಲಿ ಇದೇ ದರದಲ್ಲಿ ಖರೀದಿ ಮಾಡಲಾಗುತ್ತದೆ. ಆದರೆ ರೈತರು ಜನವರಿಯವರೆಗೂ ಕಾಯಬೇಕು ಅಂದರೆ ಸರಿ ಸುಮಾರು 2 ತಿಂಗಳು ಕಾಯಬೇಕು. ಇದಕ್ಕಾಗಿಯೇ ಜಿಲ್ಲಾಡಳಿತ ಈಗಾಗಲೇ ಎರಡು ಬಾರಿ ಜಿಲ್ಲೆಯ ರೈಸ್‌ ಮಿಲ್‌ ಮಾಲಕರು ಹಾಗೂ ರೈತರ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿ ಕ್ವಿಂಟಾಲ್‌ಗೆ 2,300 ರೂ.ಗಳಂತೆ ಖರೀದಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ರೈತರು ಹಾಗೂ ಮಿಲ್‌ ಮಾಲಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಭತ್ತ ಖರೀದಿ ಕೇಂದ್ರವನ್ನು 2025ರ ಜ. 1ರಿಂದ ತೆರೆಯಲು ಸರಕಾರ ಸೂಚನೆ ನೀಡಿದೆ. ಅಗತ್ಯ ಸಿದ್ಧತೆಗಳನ್ನು ಈ ಎರಡು ತಿಂಗಳಲ್ಲಿ ಮಾಡಲಾಗುವುದು. ಆದರೆ ರೈತರ ಅನುಕೂಲಕ್ಕಾಗಿ ರೈಸ್‌ ಮಿಲ್‌ ಮಾಲಕರು ಹಾಗೂ ರೈತರ ಸಭೆ ಕರೆದು ಕ್ವಿಂಟಾಲ್‌ಗೆ 2,300 ರೂ. ನೀಡಿ ಖರೀದಿಗೆ ಸೂಚನೆ ನೀಡಿದ್ದೇವೆ. ಮಿಲ್‌ ಮಾಲಕರು ಹಾಗೂ ರೈತರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next