ಕರ್ತವ್ಯದ ಅವಧಿಯಲ್ಲಿಯೇ ಖಾಸಗಿ ಆಸ್ಪತ್ರೆಗಳು ಅಥವಾ ಕ್ಲಿನಿಕ್‌ಗಳಲ್ಲಿ ಕೆಲಸ ನಿರ್ವಹಿಸುವ ಸರಕಾರಿ ವೈದ್ಯರ ವಿರುದ್ಧ ಕ್ರಮ ತೆಗೆದು ಕೊಳ್ಳುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಹೇಳಿದ್ದು, ಇದು ಸ್ವಾಗತಾರ್ಹ ನಿರ್ಧಾರವಾಗಿದೆ.
ಇಂದಿಗೂ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಇದೆ. ಅಲ್ಲದೆ ಬಹುದೊಡ್ಡ ಸಮಸ್ಯೆ ಎಂದರೆ ಬಹಳಷ್ಟು ಮಂದಿ ವೈದ್ಯರು ಸರಕಾರಿ ಆಸ್ಪತ್ರೆಗಳಿಗೆ ಹೋಗಿ ಸೇವೆ ಸಲ್ಲಿಸದೇ ಖಾಸಗಿಯಾಗಿಯೇ ಕ್ಲಿನಿಕ್ ಅಥವಾ ಆಸ್ಪತ್ರೆಗಳನ್ನು ಮಾಡಿಕೊಂಡು ಸೇವೆ ಸಲ್ಲಿಸುತ್ತಿರುವ ಪ್ರಕರಣಗಳು ಕಂಡುಬಂದಿವೆ. ಅಲ್ಲದೆ ಸಚಿವರೇ ಹೇಳಿರುವ ಪ್ರಕಾರ ಮೈಸೂರು ಭಾಗದಲ್ಲಿ ಇಂಥ ಪ್ರಕರಣಗಳ ಬಗ್ಗೆ ದೂರು ಬಂದಿದ್ದು, ಕಠಿನ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇದರ ಜತೆಗೆ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೈದ್ಯರಿಗೆ ದಿನಕ್ಕೆ ಮೂರು ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯ ಮಾಡುವುದಾಗಿ ಹೇಳಿದ್ದಾರೆ. ಹಾಗೆಯೇ ವೈದ್ಯರು ನಿಯಮಗಳನ್ನು ಉಲ್ಲಂ ಸದಂತೆ ಜಿಯೊ ಟ್ಯಾಗ್ ಅಳವಡಿಸುವ ಹಾಗೂ ಕಚೇರಿ ಅವಧಿ ಮುಗಿದ ಅನಂತರ ಕಾಲೇಜಿನಲ್ಲಿಯೇ ಖಾಸಗಿಯಾಗಿ ಚಿಕಿತ್ಸೆ ನೀಡುವ ಅವಕಾಶವನ್ನು ವೈದ್ಯರಿಗೆ ನೀಡುವ ಚಿಂತನೆ ಸರಕಾರದ ಮುಂದಿದೆ ಎಂದು ಹೇಳಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಸಚಿವರ ಈ ಎಚ್ಚರಿಕೆ ಮಾತುಗಳು ಸ್ವಾಗತಾರ್ಹವಾದವುಗಳೇ ಆಗಿವೆ. ಆದರೆ ವೈದ್ಯಕೀಯ ಸೇವೆ ಈಗ ವಾಣಿಜ್ಯಾತ್ಮಕವಾಗಿ ಬದಲಾಗಿದ್ದು, ಈ ಎಚ್ಚರಿಕೆ ಮಾತುಗಳನ್ನು ವೈದ್ಯರು ಆಲಿಸುತ್ತಾರೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಅಲ್ಲದೆ ಸರಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿಯೇ ಹೆಚ್ಚು ವರಮಾನ ಬರುತ್ತಿದ್ದರೆ ಅಂಥ ವೈದ್ಯರು ಸರಕಾರಿ ಕೆಲಸ ಬಿಟ್ಟು ಖಾಸಗಿಯಾಗಿಯೇ ಕ್ಲಿನಿಕ್‌ಗಳು ತೆರೆಯಲು ಮುಂದಾಗಬಹುದು.
ವೈದ್ಯರನ್ನು ನಾವು ನಾರಾಯಣನಿಗೆ ಹೋಲಿಕೆ ಮಾಡುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಕಠಿನ ಮಾತುಗಳ ಬಗ್ಗೆ ಕೇಳಲು ಅಷ್ಟೇ ಚೆನ್ನ ಎಂದು ಹೇಳಬಹುದು. ಬೇರೆ ಸೇವೆಗಳಂತೆ ನಾವು ವೈದ್ಯರ ಸೇವೆಯನ್ನು ಪರಿಗಣಿಸಲು ಸಾಧ್ಯವಿಲ್ಲ. ಅದೆಷ್ಟೋ ಬಾರಿ ಹೆಚ್ಚಿನ ಹಣಕ್ಕಾಗಿ ವೈದ್ಯರು ಖಾಸಗಿ ಸೇವೆ ಮಾಡುತ್ತಾರೆ ಎಂದು ದೂರು ಬರುತ್ತದೆಯಾದರೂ ಇನ್ನೊಂದು ವರ್ಗ ಹೇಳುವ ಪ್ರಕಾರ ಹೆಚ್ಚಿನ ಮಂದಿಗೆ ನುರಿತ ವೈದ್ಯರ ಕಡೆಯಿಂದ ಚಿಕಿತ್ಸೆ ಸಿಕ್ಕಂತಾಗುತ್ತದೆ. ಇದನ್ನು ಮನಗಂಡು ಸರಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗುತ್ತದೆ.
ಹೀಗಾಗಿಯೇ ಸರಕಾರಿ ಕಾಲೇಜುಗಳಲ್ಲಿಯೇ ಅವಧಿ ಮುಗಿದ ಅನಂತರ ಖಾಸಗಿಯಾಗಿ ಚಿಕಿತ್ಸೆ ಕೊಡಿಸುವ ಅಥವಾ ಇದಕ್ಕೆ ಅವಕಾಶ ನೀಡುವ ಬಗ್ಗೆ ಹೇಳಿರುವುದು ಉತ್ತಮವಾದ ಚಿಂತನೆ.
ಏನೇ ಆದರೂ ಕಟ್ಟಕಡೆಯದಾಗಿ ಜನಸಾಮಾನ್ಯರಿಗೆ ಉತ್ತಮವಾದ ಆರೋಗ್ಯ ಸಿಗುವಂತಾಗಬೇಕು. ಇಲ್ಲಿ ವೈದ್ಯರ ಮನವೊಲಿಕೆ ಮಾಡಿ ಅಥವಾ ಎಚ್ಚರಿಕೆ ನೀಡಿ ಸರಕಾರಿ ಆಸ್ಪತ್ರೆಗಳಲ್ಲೂ ಅವರು ಲಭ್ಯವಾಗಿರುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ ಯಾಗಿದೆ. ಅಲ್ಲದೆ ನಮ್ಮಲ್ಲಿನ ಬಡವರಿಗೆ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಶಕ್ತಿ ತೀರಾ ಕಡಿಮೆಯಾಗಿಯೇ ಇದೆ. ಹೀಗಾಗಿ ಎಲ್ಲಿಯೂ ಮೋಸವಾಗದಂತೆ ಉತ್ತಮವಾದ ಆರೋಗ್ಯ ರಾಜ್ಯ ನಿರ್ಮಾಣ ಮಾಡಬೇಕಾಗಿದೆ.