ರಾಜ್ಯದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಂಬಂಧಿತ ಸಂಘಟನೆಗಳು ಒಂದರ ಮೇಲೊಂದು ಪ್ರತಿಭಟನೆ ಕರೆ ನೀಡುತ್ತಿವೆ. ಈಚೆಗಷ್ಟೇ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ನೇತೃತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದು, ಸರಕಾರದ ಭರವಸೆ ಮೇಲೆ ಪ್ರತಿಭಟನೆ ಹಿಂದೆಗೆದುಕೊಂಡಿತು. ಆದರೆ ಈಗ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ( ರುಪ್ಸಾ) ಪ್ರತಿಭಟನೆಗೆ ಮುಂದಾಗಿದೆ.
ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೆಲವನ್ನು ಬಗೆ ಹರಿಸುವ ಭರವಸೆಯನ್ನು ಸರಕಾರ ಈಗಾಗಲೇ ನೀಡಿದೆ. ಅದಾಗ್ಯೂ ಇತ್ತೀಚೆಗೆ ಖಾಸಗಿ ಶಾಲಾ ಶಿಕ್ಷಕರ ಮತ್ತು ಆಡಳಿತ ಮಂಡಳಿಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡುವಂತೆ ಕ್ಯಾಮ್ಸ್ ಪ್ರತಿಭಟನೆ ನಡೆಸಿತ್ತು. ಮುಖ್ಯಮಂತ್ರಿಗಳ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಪ್ರತಿ ಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಸರಕಾರದಿಂದ ಆಗಬಹುದಾದ ಪರಿಹಾರ ಕಾರ್ಯದ ಬಗ್ಗೆಯೂ ಭರವಸೆ ನೀಡಿದ್ದರು. ಸರಕಾರ ಕಾಲಾವಕಾಶ ಕೋರಿದ್ದರಿಂದ ಕ್ಯಾಮ್ಸ್ ಪ್ರತಿಭಟನೆಯ ನಂತರ ಶೈಕ್ಷಣಿಕ ಚಟುವಟಿಕೆಯನ್ನು ಮುಂದುವರಿಸಿದೆ.
ಆದರೆ ಈಗ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ( ರುಪ್ಸಾ) ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆನ್‌ಲೈನ್ ತರಗತಿಗಳನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ ಡಿಸೆಂಬರ್ ಅಂತ್ಯದೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಶಾಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಸರಕಾರಕ್ಕೆ ನೀಡಿದೆ. ಇದರಿಂದ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮತ್ತು ಅವರ ಪಾಲಕ, ಪೋಷಕರಿಗೆ ಆತಂಕ ಸೃಷ್ಟಿಯಾಗಿದೆ. ಕೊರೊನಾ ಸಂದರ್ಭದಲ್ಲಿ ಆನ್‌ಲೈನ್ ತರಗತಿಯೂ ರದ್ದಾದರೆ ಮಕ್ಕಳ ಭವಿಷ್ಯ ಹೇಗೆ ಎಂಬ ಚಿಂತೆಯಲ್ಲಿ ಬಹುತೇಕ ಪಾಲಕರಿದ್ದಾರೆ.
ಸರಕಾರ ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸುವ ಸಂಬಂಧ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕಿದೆ. ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಮತ್ತು ಅವರ ಪಾಲಕ, ಪೋಷಕರಲ್ಲಿ ಸೃಷ್ಟಿಯಾಗಿರುವ ಆತಂಕ ದೂರ ಮಾಡಬೇಕಿದೆ. ಮುಂದಿನ ತರಗತಿಯ ದಾಖಲಾತಿ ಬಗ್ಗೆ ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟತೆ ನೀಡಿದ್ದಾರೆ. ಮುಂದಿನ ತರಗತಿ ದಾಖಲಾತಿ ಕಡ್ಡಾಯ, ಹೀಗಾಗಿ ದಾಖಲಾತಿ ಮಾಡಲೇಬೇಕು. ಇದರ ಜತೆಗೆ ಪರೀಕ್ಷೆ, ಹಾಜರಾತಿ, ಕನಿಷ್ಠ ಮೌಲ್ಯ ಮಾಪನ, ಪಠ್ಯ ಕಡಿತದ ಗೊಂದಲ, ಕೊರೊನಾ ಸುರಕ್ಷತೆ ಸಂಬಂಧ ಖಾಸಗಿ ಶಾಲೆ ಗಳು ಕೇಳಿರುವ ಪ್ರತ್ಯೇಕ ಪ್ರಮಾಣಿತ ಕಾರ್ಯಚರಣ ವಿಧಾನ(ಎಸ್‌ಒಪಿ), ತರಗತಿ ಯಲ್ಲಿ ವಿದ್ಯಾರ್ಥಿಗೆ ಕೊರೊನಾ ಬಂದರೆ, ಜವಾಬ್ದಾರರು ಯಾರು ಎಂಬ ಆಡಳಿತ ಮಂಡಳಿಗಳ ಪ್ರಶ್ನೆಗೆ ಸರಕಾರ ಸ್ಪಷ್ಟ ಉತ್ತರ ನೀಡಬೇಕಿದೆ. ಹಾಗೆಯೇ ಅನುದಾನ ರಹಿತ ಶಾಲೆಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಸರಕಾರಿ ಮಟ್ಟದಲ್ಲಿ ಆಗಬಹುದಾದ ಪರಿಹಾರ ಕ್ರಮದ ಬಗ್ಗೆ, ಖಾಸಗಿ ಶಾಲಾ ಶಿಕ್ಷಕರು ಕೊರೊನಾದಿಂದ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಹಾಗೂ ಇತರ ಸವಾಲುಗಳಿಗೆ ಸರಕಾರದಿಂದ ನೀಡಬಹುದಾದ ಪರಿಹಾರಗಳ ಬಗ್ಗೆಯೂ ಸ್ಪಷ್ಟತೆ ಶಾಲಾರಂಭದ ಒಳಗೆ ನೀಡಿದರೆ ಶಿಕ್ಷಕರಿಗೆ, ಮಕ್ಕಳಿಗೆ ಹಾಗೂ ಪಾಲಕ ಪೋಷಕರಿಗೆ ಹೆಚ್ಚು ಅನುಕೂಲವಾಗಲಿದೆ.
ಆದರೆ, ಶಾಲಾಡಳಿತ ಮಂಡಳಿಗಳು ಇದನ್ನೇ ನೆಪವಾಗಿಸಿಕೊಂಡು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬರೆ ಎಳೆಯವುದು ಸರ್ವಥಾ ಸರಿಯಲ್ಲ. ಸರಕಾರ ಮತ್ತು ಶಾಲೆಗಳ ನಡುವಿನ ಜಗ್ಗಾಟದಲ್ಲಿ ವಿದ್ಯಾರ್ಥಿಗಳು ಬಡವಾಗದಂತೆ ನೋಡಿಕೊ ಳ್ಳುವುದು ಆಡಳಿತ ಮಂಡಳಿಗಳ ಕರ್ತವ್ಯ ಕೂಡ ಹೌದು. ಮೊದಲಿಗೆ ಆಡಳಿತ ಮಂಡಳಿ ಸಂಘಗಳು ತಮ್ಮತಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿರಿಸಿ, ಸರಕಾರದ ಜತೆ ಮಾತುಕತೆ ಕುಳಿತು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ.