Advertisement

ಪ್ರವೇಶಾತಿಯಲ್ಲಿ ಸರ್ಕಾರಿ ಶಾಲೆಗೆ ಸಡ್ಡು ಹೊಡೆಯುತ್ತಿವೆ ಖಾಸಗಿ ಶಾಲೆಗಳು

12:41 AM Sep 30, 2019 | Lakshmi GovindaRaju |

ಚನ್ನರಾಯಪಟ್ಟಣ: ತಾಲೂಕಿನಲ್ಲಿ 410 ಸರ್ಕಾರಿ ಶಾಲೆಗಳಿದ್ದು 15,099 ವಿದ್ಯಾರ್ಥಿಗಳಿದ್ದರೆ ಕೇವಲ 87 ಖಾಸಗಿ ಶಾಲೆಗಳಲ್ಲಿ 16,131 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.

Advertisement

ಸರ್ಕಾರಿ ಶಾಲೆ ಅಂಕಿ ಅಂಶ: ತಾಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು 208 ಇದ್ದು ಸುಮಾರು 6,288 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 161 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 3,251 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಆರು ಹೋಬಳಿಯಿಂದ 41 ಸರ್ಕಾರಿ ಪ್ರೌಢಶಾಲೆಗಳಲ್ಲಿ 5,560 ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಂದ 15,099 ವಿದ್ಯಾರ್ಥಿಗಳಿದ್ದಾರೆ.

ಅನುದಾನಿತ ಶಾಲೆ ಅಂಕಿ ಅಂಶ: ಸರ್ಕಾರದಿಂದ ಅನುದಾನಪಡೆದು ನಡೆಯುತ್ತಿರುವ ಹಿರಿಯ ಪ್ರಾಥಮಿಕ ಶಾಲೆ ತಾಲೂಕಿನಲ್ಲಿ 8 ಇದ್ದು 1,018 ವಿದ್ಯಾರ್ಥಿಗಳಿದ್ದಾರೆ. 13 ಅನುದಾನಿತ ಪ್ರೌಢಶಾಲೆಗಳಿದ್ದು, ಅದರಲ್ಲಿ 478 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಒಟ್ಟು 3,111 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಅನುದಾನ ರಹಿತ ಶಾಲೆಗಳ ವಿವರ‌: ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಖಾಸಗಿ ಒಡೆತನ ಹೊಂದಿರುವ ಕಿರಿಯ ಪ್ರಾಥಮಿಕ ಶಾಲೆ ತಾಲೂಕಿನಲ್ಲಿ 2 ಇದ್ದು 1,615 ವಿದ್ಯಾರ್ಥಿಗಳಿದ್ದಾರೆ, ಇನ್ನು 41 ಹಿರಿಯ ಪ್ರಾಥಮಿಕ ಶಾಲೆಗಳಿದ್ದು 7,968 ವಿದ್ಯಾರ್ಥಿಗಳಿದ್ದಾರೆ, ಖಾಸಗಿ ಪ್ರೌಢಶಾಲೆ 23 ಇದ್ದು 2,552 ವಿದ್ಯಾರ್ಥಿಗಳು ವ್ಯಾಸಂಗ ಮಡುತ್ತಿದ್ದು 13,020 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಆರ್‌ಟಿಇ ನಿಲ್ಲಿಸಿದರೂ ಸರ್ಕಾರಿ ಶಾಲೆ ದಾಖಲಾತಿ ಇಳಿಮುಖ: ಕಳೆದ ಸಾಲಿಗೆ ಹೋಲಿಸಿದರೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಇಳಿಮುಖವಾಗಿದೆ. ಕಳೆದ ಸಾಲಿನಲ್ಲಿ ಆರ್‌ಟಿಇ ಇದ್ದರೂ 1,189 ಮಂದಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಒಂದನೇ ತರಗತಿಗೆ ದಾಖಲಾಗಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಸ್ಥಗಿತ ಮಾಡಲಾಗಿದೆ. ಆದರೂ 1,134 ಮಂದಿ ವಿದ್ಯಾರ್ಥಿಗಳು ಮಾತ್ರ ದಾಖಲಾಗುವ ಮೂಲಕ ಕಳೆದ ಸಾಲಿಗಿಂತ 55 ವಿದ್ಯಾರ್ಥಿಗಳು ಕಡಿಮೆ ದಾಖಲಾಗಿದ್ದಾರೆ. ಖಾಸಗಿ ಶಾಲೆಗೆ 1,895 ವಿದ್ಯಾರ್ಥಿಗಳು ಒಂದನೇ ತರಗತಿಗೆ ದಾಖಲಾಗಿದ್ದಾರೆ.

Advertisement

ತಾಲೂಕಿನ ಒಂದು ಶಾಲೆ ಮಾತ್ರ ಆರ್‌ಟಿಇ: ದಂಡಿಗನಹಳ್ಳಿ ಹೋಬಳಿ ಅರಳಬರಗೂರು ಗ್ರಾಮ ವ್ಯಾಪ್ತಿಯಲ್ಲಿರುವ ವೆಸ್ಟ್‌ ಹಿಲ್‌ ರಿಪಬ್ಲಿಕ್‌ ಶಾಲೆಗೆ ಮಾತ್ರ ಪ್ರಸಕ್ತ ವರ್ಷ ಆರ್‌ಟಿಇ ಸೌಲಭ್ಯವಿದ್ದು ಆರ್‌ಟಿಇ ಅಡಿಯಲ್ಲಿ 7 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 41 ಶಾಲೆಗಳು ಆರ್‌ಟಿಇನಿಂದ ಹೊರಗುಳಿದಿವೆ. ಕಳೆದ ಸಾಲಿನಲ್ಲಿ ಸರ್ಕಾರ 462 ಆರ್‌ಟಿಇ ಸೀಟುಗಳನ್ನು ನೀಡಿತ್ತು. ಇದರಲ್ಲಿ 412 ಮಂದಿ ಫ‌ಲಾನುಭವಿಗಳು ಪ್ರಯೋಜನ ಪಡೆದಿದ್ದರು. 50 ಮಂದಿ ಎರಡು ಮೂರು ಶಾಲೆಗೆ ದಾಖಲಾತಿಗೆ ಅವಕಾಶ ಆಗಿದ್ದರಿಂದ 50 ಸೀಟು ಹಾಗೆ ಉಳಿದಿದ್ದವು. ಪ್ರಸಕ್ತ ವರ್ಷ ಆರ್‌ಟಿಇ ಯೋಜನೆ ಇದ್ದಿದ್ದರೆ 500 ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು.

ಜಾರಿಯಾಗದ ನಿಯಮ: ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಯಾವುದೇ ಇರಲಿ ಆ ಶಾಲೆಗೆ ಇಂತಿಷ್ಟು ಮಗು ಮಾತ್ರ ದಾಖಲಾಗಬೇಕು ಎಂಬ ನಿಯಮ ಜಾರಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ಹಿಂದಿನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮುಂದಾಗಿದ್ದರು. ಈ ನಿಯಮ ಜಾರಿಯಾಗಿದ್ದರೆ ಖಾಸಗಿ ಶಾಲೆಗಳು ಸಾವಿರಾರು ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಂಡು ಹಣ ವಸೂಲಿ ಮಾಡುವುದ ತಪ್ಪಿಸುವುದು ಹಾಗೂ ಗುಣಮಟ್ಟದ ಶಿಕ್ಷಣ ಪ್ರತಿ ವಿದ್ಯಾರ್ಥಿಗೆ ದೊರೆಯುವಂತೆ ಮಾಡುವುದು ಉದ್ದೇಶವಾಗಿತ್ತು. ಆದರೆ ಇದು ಜಾರಿಗೆಯಾಗದ ಹಿನ್ನೆಲೆಯಲ್ಲಿ ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳು ಏಳು ಎಂಟು ವಿಭಾಗ ಮಾಡಿ ಮಕ್ಕಳ ಪ್ರವೇಶ ಪಡೆದು ಕುರಿದೊಡ್ಡಿ ಮಾಡಿಕೊಂಡಿದ್ದಾರೆ ಇದಕ್ಕೆ ಕಡಿವಾಣ ಬೀಳುವುದೆಂದು?

ದಶಕದಿಂದೀಚೆಗೆ ಪೋಷಕರು ಖಾಸಗಿ ಶಾಲೆಗೆ ಹೆಚ್ಚು ಮುತುವರ್ಜಿ ತೋರುತ್ತಿದ್ದಾರೆ. ಸರ್ಕಾರ ಉಚಿತವಾಗಿ ಪುಸ್ತಕ, ಸಮವಸ್ತ್ರ ಹಾಗೂ ಮಧ್ಯಾಹ್ನ ಬಿಸಿಯೂಟ ನೀಡಿದರು ಸಹ ಪೋಷಕರು ತಮ್ಮ ಪ್ರತಿಷ್ಠೆಗಾಗಿ ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿಸುತ್ತಿದ್ದಾರೆ.
-ಎಚ್‌.ಕೆ.ಪುಷ್ಪಲತಾ, ಬಿಇಒ

ಸರ್ಕಾರಿ ಶಾಲೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ಶಿಕ್ಷಕರೇ ಕಾರಣ. ಶಿಕ್ಷಕರು ತಾವು ಪಡೆಯುವ ವೇತನಕ್ಕೆ ನ್ಯಾಯ ಕಲ್ಪಿಸುವ ರೀತಿ ಕೆಲಸ ಮಾಡುತ್ತಿಲ್ಲ. ಶಿಕ್ಷಕರ ಮೇಲೆ ಕ್ರಮಕ್ಕೆ ಮುಂದಾಗುವ ಅಧಿಕಾರಿಗಳ ವಿರುದ್ಧವೇ ಶಿಕ್ಷಕರ ಸಂಘಟನೆಗಳು ಪ್ರತಿಭಟನೆ ಮಾಡುತ್ತವೆ.
-ಹರ್ಷವರ್ಧನ್‌, ಸಾಮಾಜಿಕ ಹೋರಾಟಗಾರ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next