Advertisement

ಖಾಸಗಿ ಶಾಲೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ! 

12:26 PM Aug 26, 2018 | |

ಬೆಂಗಳೂರು: ಒಂದೆಡೆ ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಮತ್ತೂಂದಡೆ ಹತ್ತಾರು ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಶಿಡ್ಲಘಟ್ಟ ತಾಲ್ಲೂಕಿನ ಅತ್ಯಂತ ಹಿಂದುಳಿದ ಗ್ರಾಮ ಚಿ. ಮಂಗಲದ ಸರ್ಕಾರಿ ಪ್ರೌಢಶಾಲೆಯನ್ನು ಹುಡುಕಿಕೊಂಡು ಬರುತ್ತಿದ್ದಾರೆ!

Advertisement

ಹೌದು, ಚಿ.ಮಂಗಲದ ಸರ್ಕಾರಿ ಪ್ರೌಢಶಾಲೆ ಈಗ ಖಾಸಗಿ ಶಾಲೆಗೆ ಪೈಪೋಟಿ ಒಡುತ್ತಿದ್ದು, ಇಲ್ಲಿ ಕಲಿಯಲು ಬೇರೆ ಬೇರೆ ಶಾಲೆಗಳಿಂದ ಮಕ್ಕಳು ಬರುತ್ತಿದ್ದಾರೆ. ಅದರಲ್ಲೂ ಮಕ್ಕಳ ಭವಿಷ್ಯದ ಪ್ರಮುಖ ಘಟ್ಟವಾದ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ಗ್ರಾಮದ ಶಾಲೆಯತ್ತ ಮುಖಮಾಡುತ್ತಿದ್ದಾರೆ.

ಇದಕ್ಕೆ ಕಾರಣ- ಆ ಶಾಲೆ ಅಳವಡಿಸಿಕೊಂಡಿರುವ ತಂತ್ರಜ್ಞಾನ ಆಧಾರಿತ ಕಲಿಕೆ ಮತ್ತು ಬೋಧನಾ ವ್ಯವಸ್ಥೆ. ಇದನ್ನು ರೂಪಿಸಿದವರು ಅದೇ ಶಾಲೆಯ ಗಣಿತ ಶಿಕ್ಷಕ ಡಾ.ಎಂ. ಶಿವಕುಮಾರ್‌. ಇದಕ್ಕಾಗಿ ಅವರಿಗೆ ಪ್ರಸಕ್ತ ಸಾಲಿಗೆ “ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ’ ಗೌರವ ಸಂದಿದೆ.  

ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆ. ಹಾಗಾಗಿಯೇ ಬಹುತೇಕ ಮಕ್ಕಳು ಈ ವಿಷಯದಲ್ಲಿ ನಿರಾಸಕ್ತಿ. ಅದರಲ್ಲೂ ಮಿಲೇನಿಯಂ ಜನರೇಷನ್‌ಗೆ ಓದಿಗಿಂತ ಮೊಬೈಲ್‌ ಮತ್ತು ಇಂಟರ್‌ನೆಟ್‌ ಗೀಳು ಹೆಚ್ಚು. ಅದೇ ಗೀಳನ್ನು ಮಕ್ಕಳ ಕಲಿಕಾ ಸಾಧನವಾಗಿ ಮಾಡಿದರು.

ಆಟವಾಡುತ್ತಾ ಗಣಿತ ಕಲಿಯುವ ತಂತ್ರಜ್ಞಾನ ರೂಪಿಸಿದರು. ಇದಕ್ಕಾಗಿ “ಎಸ್ಸೆಸ್ಸೆಲ್ಸಿ ಪಾಸಿಂಗ್‌ ಪ್ಯಾಕೇಜ್‌ ಮ್ಯಾಥ್ಸ್’, “ಇಂಟರ್‌ಆ್ಯಕ್ಷನ್‌ ಕ್ವಿಜ್‌’ ಹಾಗೂ ಬೇಸಿಕ್‌ ಮ್ಯಾಥಮೆಟಿಕ್ಸ್‌’ ಎಂಬ ಮೂರು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿದರು. ಜತೆಗೆ ಯ್ಯೂಟೂಬ್‌ ಚಾನೆಲ್‌ ಆರಂಭಿಸಿದರು.

Advertisement

ಇವೆಲ್ಲವೂ ಸಂಪೂರ್ಣ ಕನ್ನಡದಲ್ಲೇ ಇರುವುದರಿಂದ ಗ್ರಾಮೀಣ ಮಕ್ಕಳಿಗೆ ಹೆಚ್ಚು ಹತ್ತಿರವಾಯಿತು. ಇದರೊಂದಿಗೆ ಗಣಿತವೂ ಆಪ್ತವಾಯಿತು ಎಂದು ಡಾ.ಶಿವಕುಮಾರ್‌ “ಉದಯವಾಣಿ’ಗೆ ತಿಳಿಸಿದರು. ಈ ಹಿಂದಿನಂತೆ ಚಾಕ್‌ಪೀಸ್‌ನಿಂದ ಬೋರ್ಡ್‌ ಮೇಲೆ ಬರೆದು ಕಲಿಸುವ ಪದ್ಧತಿ ಈಗ ಹಳೆಯದಾಯ್ತು. ಮಕ್ಕಳು ಹೆಚ್ಚಾಗಿ ಈಗ ವೀಡಿಯೊ ಕ್ಲಿಪಿಂಗ್‌ ಮತ್ತು ಗೇಮ್‌ಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

ಆದ್ದರಿಂದ ಈ ಆ್ಯಪ್‌ಗ್ಳನ್ನು ಉಚಿತವಾಗಿ ಮಕ್ಕಳಿಗೆ ತಲುಪಿಸಿ, ಆ ಮೂಲಕ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ಮೊದಲ ಆ್ಯಪ್‌ನಲ್ಲಿ 60 ಅಂಕಗಳ ಪರಿಹರಿಸಿ ಸಮಸ್ಯೆಗಳನ್ನು ನೀಡಲಾಗಿರುತ್ತದೆ. ಪಿಡಿಎಫ್ನಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಮಕ್ಕಳು ವೀಕ್ಷಿಸಬಹುದು. ಎರಡನೇ ಆ್ಯಪ್‌ನಲ್ಲಿ ಆಟಗಳಿದ್ದು, ಪ್ರಶ್ನೆಗೆ ಕೇಳಲಾಗುತ್ತದೆ. ಅದಕ್ಕೆ ಸರಿ ಉತ್ತರವನ್ನು ಮಕ್ಕಳು ಭರ್ತಿ ಮಾಡಬೇಕು.

ಕೊನೆಗೆ ಅಂಕಗಳನ್ನು ನೀಡಲಾಗುವುದು. ಮೂರನೇ ಆ್ಯಪ್‌ನಲ್ಲಿ ಮೂಲ ಗಣಿತದ ಬಗ್ಗೆ ತಿಳಿಸಿಕೊಡಲಾಗುವುದು. ಇದಲ್ಲದೆ, ವೀಡಿಯೊ ಕ್ಲಿಪಿಂಗ್‌ಗಳೂ ಇದ್ದು, ಅಲ್ಲಿ ಮಕ್ಕಳು ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು. ಸುಮಾರು 300ಕ್ಕೂ ಅಧಿಕ ಮಕ್ಕಳು ಯ್ಯೂಟೂಬ್‌ ಫಾಲೋ ಮಾಡುತ್ತಿದ್ದಾರೆ ಎಂದು ಡಾ.ಶಿವಕುಮಾರ್‌ ವಿವರಿಸಿದರು. 

ಈ ತಂತ್ರಜ್ಞಾನ ಆಧಾರಿತ ಕಲಿಕೆಯಿಂದ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚುವುದರ ಜತೆಗೆ ಎಚ್‌. ಕ್ರಾಸ್‌, ಸುಮಕಾ, ಬೈರವೇಶ್ವರ, ನಡಪಿನಾಯಕನಹಳ್ಳಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿರುವ ಖಾಸಗಿ ಶಾಲೆಗಳಿಂದ 20ಕ್ಕೂ ಹೆಚ್ಚು ಮಕ್ಕಳು ನಮ್ಮ ಸರ್ಕಾರಿ ಶಾಲೆಗೆ ಪ್ರವೇಶ ಪಡೆದಿದ್ದಾರೆ.

2014ರಲ್ಲಿ ಒಂದೇ ಒಂದು ಡಿಸ್ಟಿಂಕ್ಷನ್‌ (ಅತ್ಯುತ್ತಮ ಶ್ರೇಣಿ) ವಿದ್ಯಾರ್ಥಿ ಇರಲಿಲ್ಲ. ಇಂದು ಆ ಸಂಖ್ಯೆ 11ಕ್ಕೆ ಏರಿದ್ದು, ಪ್ರಥಮ ಶ್ರೇಣಿಯಲ್ಲಿ 50 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದಕ್ಕೆ ಸರ್ಕಾರ ತಮಗೆ “ತಂತ್ರಜ್ಞಾನ ಆಧಾರಿತ ಕಲಿಕೆ’ ಕಾರ್ಯಕ್ರಮದಡಿ ನೀಡಿದ ತರಬೇತಿ ಪ್ರೇರಣೆ ಆಯಿತು ಎಂದೂ ಅವರು ಸಂತಸ ವ್ಯಕ್ತಪಡಿಸಿದರು. 

ಫ‌ಲಿತಾಂಶ ಶೇ.90ಕ್ಕೆ ಏರಿಕೆ: ಅದೇ ರೀತಿ, ಶೈಲಾ ಅವರು ಈ ಹಿಂದೆ ಟಿ. ದಾಸರಹಳ್ಳಿಯ ಸರ್ಕಾರಿ ಹೈಸ್ಕೂಲ್‌ನ ಮುಖ್ಯ ಶಿಕ್ಷಕಿಯಾಗಿದ್ದರು. ಆ ಅವಧಿಯಲ್ಲಿ ಶಾಲೆಯನ್ನು ಪುನಶ್ಚೇತನಗೊಳಿಸಿ, ಖಾಸಗಿ ಶಾಲೆಗಿಂತ ಆಕರ್ಷಣೀಯವಾಗಿ ಮಾಡಿದ್ದಾರೆ.

ಮೂಲಸೌಕರ್ಯಗಳ ಜತೆಗೆ ಗುಣಮಟ್ಟವನ್ನೂ ಹೆಚ್ಚಿಸಿದ್ದು, ಶಾಲೆಯ ಫ‌ಲಿತಾಂಶ ವರ್ಷದಿಂದ ವರ್ಷಕ್ಕೆ ಏರಿಕೆ ಕ್ರಮದಲ್ಲಿ ಸಾಗುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ 2005ರವರೆಗೆ ಈ ಶಾಲೆಯ ಫ‌ಲಿತಾಂಶ ಶೇ. 40ಕ್ಕಿಂತ ಕಡಿಮೆ ಇತ್ತು. ತದನಂತರದಲ್ಲಿ ಶೇ. 90ಕ್ಕೂ ಅಧಿಕ ಆಗಿದೆ. 

ಇನ್ನು ದೇವನಹಳ್ಳಿಯ ದೈಹಿಕ ಶಿಕ್ಷಕ ಡಾ.ರಮೇಶಪ್ಪ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ಸಕ್ರಿಯಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು, ಯುವಕರಿಗೆ ಯೋಗದ ಮೂಲಕ ಬೊಜ್ಜು ಕರಗಿಸುವಿಕೆ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.

ಇದರಿಂದ ನೂರಾರು ಮಕ್ಕಳಿಗೆ ಅನುಕೂಲ ಆಗಿದೆ. ಎಲ್ಲ ತರಬೇತಿಯೂ ಉಚಿತವಾಗಿ ನೀಡುತ್ತಾರೆ. ಏರೋಬಿಕ್‌, ನೃತ್ಯವನ್ನೂ ಕಲಿಸುತ್ತಾರೆ. “ಎಫೆಕ್ಟ್ ಆಫ್ ಯೋಗಾಸನ ಆನ್‌ ಬಾಡಿ ಆಫ್ ಸೆಕಂಡರಿ ಸ್ಕೂಲ್‌ ಒಬೆಸ್‌ ಬಾಯ್ಸ’ ಕುರಿತು ಪಿಎಚ್‌ಡಿ ಕೂಡ ಮಾಡಿದ್ದಾರೆ. 

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next