ಕೊಪ್ಪಳ: ನಗರದ ಐತಿಹಾಸಿಕ ಪ್ರಸಿದ್ಧ ಹುಲಿಕೆರೆಯನ್ನು ಸಾರ್ವಜನಿಕ, ಖಾಸಗಿ ಹಾಗೂ ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತವು ಹೊಸದೊಂದು ಪ್ರಸ್ತಾವನೆ ಸಿದ್ಧಪಡಿಸಿದ್ದು, 5 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ತಾಣವನ್ನಾಗಿ ರೂಪಿಸಲು ಯೋಜನೆ ರೂಪಿಸಿದೆ.
ನಗರ ಸಮೀಪದ ಹುಲಿಕೆರೆಗೆ ಐತಿಹಾಸಿಕ ಹಿನ್ನೆಲೆಯಲ್ಲಿದೆ. ಕೆರೆಯ ಬಗ್ಗೆ ಹಲವು ಇತಿಹಾಸದ ಕುರುಹುಗಳೇ ಸಾರಿ ಸಾರಿ ಹೇಳುತ್ತವೆ. ಪುರಾತನ ಕಾಲದಿಂದಲೂ ಈ ಕೆರೆಗೆ ಮಹತ್ವ ನೀಡಲಾಗಿದ್ದು, ಕೋಟೆ ಪಕ್ಕದಲ್ಲಿಯೇ ಇರುವುದರಿಂದ ಕೋಟೆಗೂ ಸೌಂದರ್ಯದ ಕಳೆ ಕಟ್ಟಿ ಕೊಟ್ಟಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಕೆರೆ ತುಂಬಿಕೊಂಡು ಸುತ್ತಲಿನ ಜನರನ್ನು ಆಕರ್ಷಿಸುತ್ತದೆ. ನೈಸರ್ಗಿಕದತ್ತವಾದ ಈ ಕೆರೆಗೆ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಕೊಪ್ಪಳ ಗುಡ್ಡಗಳ ನೀರೇ ಅಧಿಕ ಪ್ರಮಾಣದಲ್ಲಿ ಹರಿದು ಬಂದು ಸಂಗ್ರಹವಾಗುತ್ತದೆ. ನಗರ ಪ್ರದೇಶದ ಜನರೂ ಇದೇ ನೀರನ್ನು ನಿತ್ಯದ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆ ಅವಧಿಯಲ್ಲೂ ಈ ಕೆರೆಯಲ್ಲಿ ನೀರು ಬತ್ತಲ್ಲ. ಆದರೆ ಕಳೆದ ಕೆಲವು ವರ್ಷದಿಂದ ಮಳೆಯ ಕೊರತೆಯಿಂದಾಗಿ ನೀರು ಸಂಗ್ರಹ ಕಡಿಮೆಯಾಗಿದೆ. ಈ ಮೊದಲು ಜಿಲ್ಲಾಡಳಿತವು ನಿರ್ಮಿತಿ ಕೇಂದ್ರದ ಮೂಲಕ ಕೋಟೆ ಅಭಿವೃದ್ಧಿಯ ಜೊತೆಗೆ ಕೆರೆಯ ಸುತ್ತಲೂ ಅಭಿವೃದ್ಧಿ ಮಾಡಲು ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡಿತ್ತು.
ಕಾಮಗಾರಿ ನಡೆಸಿತಾದರೂ ಸರಿಯಾದ ನಿರ್ವಹಣೆ ಇಲ್ಲದಂತಾಗಿ, ಕಿಡಿಗೇಡಿಗಳ ಕಾಟದಿಂದ ಜಿಲ್ಲಾಡಳಿತ ಅಳವಡಿಕೆ ಮಾಡಿದ್ದ ಖುರ್ಚಿ, ಆಟಿಕೆ ಸಾಮಗ್ರಿ ಸೇರಿದಂತೆ ಕೆಲವೊಂದು ವಸ್ತುಗಳು ಹಾನಿಗೊಂಡಿವೆ. ಇನ್ನು ಸಂಜೆಯಾಗುತ್ತಿದ್ದಂತೆ ಕುಡುಕರ ಕಾಟವೂ ಹೆಚ್ಚಾಗಿದೆ. ಇದರಿಂದ ಕೆರೆಯ ಸುತ್ತಲೂ ವಾಯುವಿಹಾರಕ್ಕೆ ತೆರಳುತ್ತಿದ್ದ ಜನರು ಕಿಡಿಗೇಡಿಗಳ ಉಪಟಳಕ್ಕೆ ವಿಹಾರಕ್ಕೆ ತೆರಳುವುದನ್ನೇ ನಿಲ್ಲಿಸಿದ್ದಾರೆ. ಆದರೆ ಜಿಲ್ಲಾಡಳಿತವು ಪುನಃ ಈ ಕೆರೆಯ ಬಗ್ಗೆ ಕಾಳಜಿ ತೋರಿ ಸಾರ್ವಜನಿಕರ, ಖಾಸಗಿ ಹಾಗೂ ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸಿದೆ.
ಅಭಿವೃದ್ಧಿಗೆ ಚಿಂತನೆ: ನಗರೋತ್ಥಾನ ಹಂತ 2ರಲ್ಲಿ ಕೆರೆಯನ್ನು ಪಿಪಿಪಿ ಯೋಜನೆಯಡಿ ಅಭಿವೃದ್ಧಿ ಮಾಡಿದರೆ ಇದೊಂದು ಪ್ರವಾಸಿ ತಾಣವಾಗಲಿದೆ. ಇದರಿಂದ ಜನರು ಕೆರೆಯತ್ತ ಆಗಮಿಸಿ ನೈಸರ್ಗಿಕ ಸೊಬಗಲು ಆಸ್ವಾಧಿಸಲಿದ್ದಾರೆ. ಜೊತೆಗೆ ಖಾಸಗಿಗೆ ನಿರ್ವಹಣೆಗೆ ಕೊಟ್ಟರೆ ಕೆರೆ ಬಗ್ಗೆ ಕಾಳಜಿ ಮಾಡುವ ಜೊತೆಗೆ ಜನತೆಗೂ ಅನುಕೂಲವಾಗಲಿದೆ ಎಂದು ಯೋಜಿಸಿ 5 ಕೋಟಿ ರೂ. ಅನುದಾನದಲ್ಲಿ ಯೋಜನೆ ರೂಪಿಸಿದೆ. ಜೊತೆಗೆ ಬರದ ಪರಿಸ್ಥಿತಿಯಲ್ಲಿ ಕೆರೆಯ ಅಭಿವೃದ್ಧಿ ಮಾಡಿದರೆ ಅಂತರ್ಜಲ ಹೆಚ್ಚಳವಾಗಿ, ಸುತ್ತಲಿನ ರೈತಾಪಿ ವರ್ಗಕ್ಕೂ ಅನುಕೂಲವಾಗಲಿದೆ ಎಂಬುದನ್ನು ಜಿಲ್ಲಾಡಳಿತ ಮನಗೊಂಡು ಈ ಯೋಜನೆ ರೂಪಿಸಿದೆ.
ಇನ್ನೂ ಜಿಲ್ಲೆಯಲ್ಲಿ ಹಲವು ಐತಿಹಾಸಿಕ ತಾಣಗಳಿವೆ. ಕೊಪ್ಪಳದ ಗವಿಮಠ, ಮಳೆ ಮಲ್ಲೇಶ್ವರ ಹಾಗೂ ಕುಕನೂರು ದೇವಾಲಯ ಸೇರಿದಂತೆ ಕೊಪ್ಪಳ ಕೋಟೆ ಸಹ ಐತಿಹಾಸಿಕ ತಾಣವಾಗಿದ್ದು, ಇದರೊಟ್ಟಿಗೆ ಹುಲಿಕೆರೆಯನ್ನು ಅಭಿವೃದ್ಧಿ ಮಾಡಿದರೆ ಮುಂದಿನ ದಿನದಲ್ಲಿ ಪ್ರವಾಸಿ ತಾಣವಾಗಿ ಜನರನ್ನ ತನ್ನತ್ತ ಆಕರ್ಷಣೆ ಮಾಡಲಿದೆ ಎಂಬ ಉದ್ದೇಶದಿಂದಲೇ ಯೋಜನೆ ಸಿದ್ಧವಾಗಿದ್ದು ಪೌರಾಡಳಿತ ಇಲಾಖೆಯ ಮೂಲಕ ಮೂಲ ಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಗೆ ಸಿದ್ಧ ಮಾಡಲಾಗಿದೆ.
ಒಟ್ಟಿನಲ್ಲಿ ಕೊಪ್ಪಳ ಕೋಟೆಯ ಪಕ್ಕದಲ್ಲೇ ಅನಾಥವಾಗಿದ್ದ ಕೆರೆಯ ಬಗ್ಗೆ ಜಿಲ್ಲಾಡಳಿತ ಹಾಗೂ ನಗರಸಭೆಯೂ ಸಾರ್ವಜನಿಕ, ಖಾಸಗಿ ಸಹಯೋಗದಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಅಂದುಕೊಂಡಂತೆ ಯೋಜನೆಗೆ ಅನುಮೋದನೆ ದೊರೆತರೆ ಮಾತ್ರ ಅಭಿವೃದ್ಧಿ ಕಂಡು ಜನರಿಗೆ ಕೆರೆಯ ನೈಸರ್ಗಿಕ ಸೊಬಗ ಆಸ್ವಾಧಿಸಲು ಸಾಧ್ಯವಾಗಲಿದೆ.
ಹುಲಿ ಕೆರೆಯ ಅಭಿವೃದ್ಧಿಗೆ ಹೊಸ ದೊಂದು ಯೋಜನೆ ರೂಪಿಸಿದ್ದೇವೆ. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಅಭಿವೃದ್ಧಿ ಪಡಿಸಲು 5 ಕೋಟಿ ರೂ. ಯೋಜನೆ ಸಿದ್ದಪಡಿಸಲಾಗಿದೆ. ಶೀಘ್ರದಲ್ಲೇ ಮೂಲಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
•ಸುನೀಲ್ ಕುಮಾರ, ಜಿಲ್ಲಾಧಿಕಾರಿ
•ದತ್ತು ಕಮ್ಮಾರ