ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆ ಇನ್ನೆರಡು ತಿಂಗಳಲ್ಲಿ ಮುಕ್ತಾಯವಾಗಿದೆ. ಮುಂದಿನ ವರ್ಷಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಲು ಮುಂದಾಗಿರುವ ಬಿಬಿಎಂಪಿ ಶಿಕ್ಷಣ ವಿಭಾಗ, ಅದಕ್ಕಾಗಿ ಶಿಕ್ಷಕರಿಗೆ ಖಾಸಗಿ ಸಂಸ್ಥೆ ಮೂಲಕ ತರಬೇತಿ ನೀಡಲು ಸಂಸ್ಥೆಯನ್ನು ಗುರುತಿಸಿದೆ. ಅದರ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹೊಸದಾಗಿ 600 ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಬಿಬಿಎಂಪಿ ಶಿಕ್ಷಣ ವಿಭಾಗದ ಅಡಿಯಲ್ಲಿ 93 ನರ್ಸರಿ ಶಾಲೆ, 16 ಪ್ರಾಥಮಿಕ ಶಾಲೆಗಳು, 33 ಪ್ರೌಢ ಶಾಲೆ, 18 ಪದವಿ ಪೂರ್ವ, 4 ಪದವಿ ಹಾಗೂ 2 ಸ್ನಾತಕೋತ್ತರ ಪದವಿ ಕಾಲೇಜುಗಳು ಸೇರಿ 167 ಶಾಲಾ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಶಾಲೆ-ಕಾಲೇಜುಗಳಲ್ಲಿ 931 ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಕೇವಲ 202 ಸಿಬ್ಬಂದಿ ಮಾತ್ರ ಕಾಯಂ ಶಿಕ್ಷಕ ಮತ್ತು ಉಪನ್ಯಾಸಕರಾಗಿದ್ದಾರೆ. ಉಳಿದಂತೆ 729 ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಬಿಬಿಎಂಪಿ ಶಾಲೆ ಮತ್ತು ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ ಕಾಯಂ ಹಾಗೂ ಹೊರಗುತ್ತಿಗೆ ಬೋಧಕ ಸಿಬ್ಬಂದಿಗೆ ಖಾಸಗಿ ಸಂಸ್ಥೆಯೊಂದರಿಂದ ತರಬೇತಿ ನೀಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಈಗಾಗಲೆ ಸಂಸ್ಥೆಯನ್ನೂ ಆಯ್ಕೆ ಮಾಡಲಾಗಿದೆ.
ಅಗಸ್ತ್ಯ ಸಂಸ್ಥೆಯಿಂದ ತರಬೇತಿ: ಬಿಬಿಎಂಪಿ ಶಿಕ್ಷಣ ವಿಭಾಗ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭದಲ್ಲಿಯೇ ಬೋಧಕ ಸಿಬ್ಬಂದಿಗೆ ತರಬೇತಿ ನೀಡುವ ಕುರಿತಂತೆ ಚಿಂತನೆ ನಡೆಸಿತ್ತು. ಇದೀಗ ಅದನ್ನು ಕಾರ್ಯಗತಗೊಳಿಸಲಾಗಿದ್ದು, ಅಗಸ್ತ್ಯ ಎಂಬ ಖಾಸಗಿ ಸಂಸ್ಥೆಯ ಮೂಲಕ ಬೋಧಕ ಶಿಕ್ಷಕರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಬೋಧಕ ಸಿಬ್ಬಂದಿ ಸದ್ಯ ಅಂತಿಮ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಬೋಧಕ ಸಿಬ್ಬಂದಿಗೆ ತರಬೇತಿಯಲ್ಲಿ ತೊಡಗಿಸುವುದರಿಂದ ಮಕ್ಕಳ ವ್ಯಾಸಂಗದ ಮೇಲೆ ಪರಿಣಾಮ ಬೀರಲಿದೆ. ತರಬೇತಿ ವೇಳೆ ಮಕ್ಕಳ ಮನಸ್ಥಿತಿಯನ್ನು ಅರಿಯುವುದು, ಬುದ್ಧಿಮತ್ತೆಯನ್ನು ಹೆಚ್ಚಿಸುವುದು, ಮಕ್ಕಳು ಸುಲಭವಾಗಿ ಕಲಿಯಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ತಿಳಿಸಲಾಗುತ್ತದೆ. ಅದರ ಜತೆಗೆ ಶಾಲಾ ವಾತಾವರಣ ಹೇಗಿರಬೇಕು ಎಂಬುದನ್ನೂ ತಿಳಿಸಿಕೊಡಲಾಗುತ್ತದೆ.
ಎಲ್ಲ ವಾರ್ಡ್‌ಗಳಲ್ಲೂ ವಿವರ ಸಂಜೆ ಮನೆ ಪಾಠ : ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಸಂಜೆ ಪಾಠದ ವ್ಯವಸ್ಥೆ ಮಾಡಲಾಗಿದೆ. ಸದ್ಯ 10 ವಾರ್ಡ್ ಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು, ಬಿಬಿಎಂ ಪಿಯ ಶಾಲೆಯಲ್ಲಿ ಸಂಜೆ ಪಾಠ ನಡೆಸಲಾಗುತ್ತಿದ್ದು, ಪಾಲಿಕೆ ಶಾಲೆ ಶಿಕ್ಷಕರೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಈ ವ್ಯವಸ್ಥೆಯನ್ನು ಉಳಿದ 233 ವಾರ್ಡ್‌ಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭದ ನಂತರ ಈ ವ್ಯವಸ್ಥೆ ಎಲ್ಲ ವಾರ್ಡ್‌ಗಳಲ್ಲೂ ಜಾರಿಗೊಳಿಸಿ, ಮಕ್ಕಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.
600 ಶಿಕ್ಷಕರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಕೆ : ಬಿಬಿಎಂಪಿ ಶಾಲೆಯಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಶೇ.80 ಶಿಕ್ಷಕರು ಮತ್ತು ಉಪನ್ಯಾಸಕರು ಹೊಸಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಬಿಬಿಎಂಪಿಯ ಶಿಕ್ಷಣ ವ್ಯವಸ್ಥೆ ಮೇಲೂ ಪರಿಣಾಮ ಬೀರುವಂತಾಗಿದೆ. ಇದರಿಂದಾಗಿ ಖಾಲಿ ಇರುವ 729 ಶಿಕ್ಷಕ ಮತ್ತು ಉಪನ್ಯಾಕ ಹುದ್ದೆಗಳಲ್ಲಿ 600 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಶಿಕ್ಷಣ ವಿಭಾಗ ಮುಂದಾಗಿದೆ. ಅದಕ್ಕಾಗಿ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮತಿಸಿದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಕಾಯಂ ಶಿಕ್ಷಕರ ನೇಮಕಾತಿ ಆರಂಭಿಸಲಾಗುತ್ತದೆ.
ಬಿಬಿಎಂಪಿ ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ಅಗಸ್ತ್ಯ ಎಂಬ ಸಂಸ್ಥೆ ಮೂಲಕ ತರಬೇತಿ ನೀಡಲಾಗುವುದು. ಜತೆಗೆ ಖಾಲಿ ಇರುವ ಶಿಕ್ಷಕ, ಉಪನ್ಯಾಸಕ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. 600 ಶಿಕ್ಷಕ, ಉಪನ್ಯಾಸರ ನೇಮಕಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ●ಡಾ |ರಾಮಪ್ರಸಾತ್ ಮನೋಹರ್, ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ ವಿಭಾಗ)
-ಗಿರೀಶ್ ಗರಗ