Advertisement

ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ವಿಶೇಷ ಅಧಿವೇಶನ

06:35 AM Sep 08, 2017 | |

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ಶೀಘ್ರವೇ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದ್ದು, ವಿಧೇಯಕ ಅಂಗೀಕಾರಕ್ಕೆ ಸೆಪ್ಟೆಂಬರ್‌ ಅಂತ್ಯದೊಳಗೆ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ಮುಂದಾಗಿದೆ.

Advertisement

ರಾಜ್ಯದ ಎಲ್ಲ ಕುಟುಂಬಗಳನ್ನು “ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ’ಗೆ(ಯೂನಿವರ್ಸಲ್‌ ಹೆಲ್ತ್‌ ಕವರೇಜ್‌) ತರುವ
ಯೋಜನೆಯನ್ನು ನವೆಂಬರ್‌ 1 ರಿಂದ ರಾಜ್ಯಾದ್ಯಂತ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕೆ ಮುನ್ನ
ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ಒಪ್ಪಿಗೆ ಪಡೆಯಬೇಕಾಗಿರುವುದರಿಂದ
ಸೆಪ್ಟೆಂಬರ್‌ ಅಂತ್ಯದೊಳಗೆ ವಿಶೇಷ ಅಧಿವೇಶನ ಕರೆಯಲು ಚಿಂತನೆ ನಡೆಸಲಾಗಿದೆ. 

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಆರೋಗ್ಯ ಸಚಿವ ರಮೇಶ್‌ಕುಮಾರ್‌, ವಿಧೇಯಕ ಅಂಗೀಕಾರವಾದ ಬಳಿಕ ಅದಕ್ಕೆ ನಿಯಮಾವಳಿಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಆದರೆ, ನ.1ರೊಳಗೆ ಈ ಕಾಯ್ದೆಯೂ ಜಾರಿಯಾಗಬೇಕಿರುವುದರಿಂದ ಸೆಪ್ಟೆಂಬರ್‌ ಅಂತ್ಯದೊಳಗೆ ವಿಧೇಯಕಕ್ಕೆ ಸದನಗಳ ಒಪ್ಪಿಗೆ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಈ ಹಿಂದೆ ರೂಪಿಸಿದ್ದ
ತಿದ್ದುಪಡಿ ವಿಧೇಯಕದಲ್ಲಿ ಕೈಗೊಂಡಿರುವ ಜನಪರ ನಿರ್ಣಯಗಳನ್ನು ಕೈಬಿಡುವುದಿಲ್ಲ. ತಪ್ಪಿತಸ್ಥರಿಗೆ ನೀಡುವ
ಶಿಕ್ಷೆಯನ್ನು 5 ರಿಂದ 3 ವರ್ಷಕ್ಕೆ ಇಳಿಸುವುದು ಸೇರಿ ಸಣ್ಣಪುಟ್ಟ ಬದಲಾವಣೆ ಮಾಡಲಾಗುವುದು ಎಂದರು.

ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು: ಯೂನಿವರ್ಸಲ್‌ ಹೆಲ್ತ್‌ ಕವರೇಜ್‌ ಯೋಜನೆ ಜಾರಿಯಾದ ಬಳಿಕ ಸರ್ಕಾರವೇ ಜನರ ಚಿಕಿತ್ಸಾ ವೆಚ್ಚ ಭರಿಸುತ್ತದೆ. ಹೀಗಾಗಿ ರೋಗಿಗಳು ಚಿಕಿತ್ಸೆಗೆ ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲ ಎಂದಾದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು. ಆದರೆ, ಹೃದಯಾಘಾತ, ಬ್ರೈನ್‌ ಹ್ಯಾಮರೇಜ್‌ ಮುಂತಾದ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ಅಗತ್ಯವಿರುವುದರಿಂದ
ಸಮೀಪದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next