ಬೀದರ : ಕೋವಿಡ್-19 ನಿರ್ವಹಣೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಒದಗಿಸಬೇಕು. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಡ್ಡಾಯ ಆದೇಶವಿದ್ದು ಇದನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮನವಿ ಮಾಡಿದರು.
ನಗರದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ಆಡಳಿತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಮಹಾಮಾರಿ ತಡೆಗೆ ತಮ್ಮ ಸಹಕಾರ ಬೇಕೇ ಬೇಕು. ಸರ್ಕಾರ ತಮ್ಮ ಜೊತೆಗೆ ಇರುತ್ತದೆ. ತಾವುಗಳು ಸಹಾಯ ಮಾಡಲೇಬೇಕು. ತಮಗೆ ಏನಾದರು ತೊಂದರೆಯಾದಲ್ಲಿ ಕರೆ ಮಾಡಿ ತಿಳಿಸಿದಲ್ಲಿ ಸಹಾಯ ಸಹಕಾರ ಮಾಡುವುದಾಗಿ ಹೇಳಿದರು.
ಡಿಸಿ ರಾಮಚಂದ್ರನ್ ಆರ್. ಮಾತನಾಡಿ, ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕೋವಿಡ್ ಕೇರ್ ಹಾಸ್ಪಿಟಲ್‌ಗೆ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ದೊಡ್ಡದಿದೆ. ಹೀಗಾಗಿ ತಾವುಗಳು ಗುಂಪಾಗಿ ಸೇರಿಯಾದರೂ ನಮಗೆ ಕೋವಿಡ್‌ಗೆ ಹಾಸಿಗೆಗಳನ್ನು ಒದಗಿಸಬೇಕು. ತಮ್ಮಲ್ಲಿ ಲಭ್ಯವಿರುವ ಬೆಡ್ ಗಳಲ್ಲಿ ತುಸು ಬೆಡ್‌ಗಳನ್ನು ಕೋವಿಡ್‌ಗೆ ನೀಡಿರಿ. ಇಂದಲ್ಲ ನಾಳೆ ತಾವುಗಳು ನೀಡಲೇಬೇಕಾಗುತ್ತದೆ. ಕೋವಿಡ್ ಹಾಸ್ಪಿಟಲ್ ಮಾಡಲು ಯಾವುದೇ ನಿಯಂತ್ರಣವಿಲ್ಲ. ನಿಮ್ಮಲ್ಲಿ ಮನವಿ ಇದೆ. ತಾವುಗಳು ಪ್ರತಿಜ್ಞೆ ಮಾಡಿದಂತೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದರು.
ತಮ್ಮ ಆಸ್ಪತ್ರೆಗೆ ಯಾವುದೇ ಸಮಯಕ್ಕೆ ಯಾರಾದರೂ ತುರ್ತು ಚಿಕಿತ್ಸೆಗೆ ಬಂದರೆ ಕೇವಲ 5 ನಿಮಿಷದಲ್ಲಿ ಕೋವಿಡ್ -19 ಪರೀಕ್ಷೆ ನಡೆಸಿ, ನಿರ್ಭಯವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಐಸಿಎಂಆರ್ ಪೋರ್ಟಲ್ ಮೂಲಕ ರ್ಯಾಪಿಡ್ ಆಂಟಿಜನ್ ಟೆಸ್ಟ್ ಲ್ಯಾಬ್‌ಗ ಅನುಮತಿ ಪಡೆದುಕೊಳ್ಳಬೇಕು ಎಂದರು. ಬೀದರ ಚಿಕ್ಕ ಜಿಲ್ಲೆ. ಇಲ್ಲಿ ಸಣ್ಣ ಸಣ್ಣ ಆಸ್ಪತ್ರೆಗಳಿವೆ. ಆದರೂ ತಾವುಗಳು ಜನತೆಗೆ ಸಹಾಯ ಮಾಡುವುದಾಗಿ ವೈದ್ಯರು ಪ್ರತಿಕ್ರಿಯಿಸಿದರು. ಎಂಎಲ್‌ಸಿ ಸೇರಿ ಅಧಿಕಾರಿಗಳು, ಐಎಂಎ ಅಧ್ಯಕ್ಷರು, ಖಾಸಗಿ ಆಸ್ಪತ್ರೆ ಮುಖ್ಯಸ್ಥರುಗಳು ಭಾಗವಹಿಸಿದ್ದರು.