ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ಮರಣ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಜಿಲ್ಲೆಯಿಂದ ರೆಫರ್ ಆಗುವ ಕೋವಿಡ್ 19 ರೋಗಿಗಳಿಗೆ ಬೆಂಗಳೂರು ಮಾರ್ಗದಲ್ಲಿರುವ ಕೊಲಂಬಿಯಾ ಏಷ್ಯಾ, ಸಹಕಾರ ನಗರದ ಆಸ್ಟರ್ ಸಿಎಂಐ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಲ್ಲಿ 15ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಜಿಲ್ಲೆಯಿಂದ ರೆಫರ್ ಆಗುವ ಸೋಂಕಿತರಿಗೆ ಆದ್ಯತೆ ಮೇರೆಗೆ ಹಾಸಿಗೆ ಒದಗಿಸಿ ತುರ್ತು ಚಿಕಿತ್ಸೆ ನೀಡಬೇಕಾಗಿರುವುದರಿಂದ ಸರ್ಕಾರಿ ಕೋಟಾದಲ್ಲಿ ಹಾಸಿಗೆ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಕ ಮಾಡಿ ಅಪರ ಜಿಲ್ಲಾಧಿಕಾರಿ ಅಮರೇಶ್ ಆದೇಶ ಹೊರಡಿಸಿದ್ದಾರೆ.
ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಜೆಆರ್ ಭವ್ಯ, ಮಧ್ಯಾಹ್ನ 2:00 ಯಿಂದ ರಾತ್ರಿ 8:00 ಗಂಟೆ ವರೆಗೆ ಸದಾನಂದ, ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಜಿತೇಂದ್ರನಾಥ್ ಅವರನ್ನು ನೇಮಕ ಮಾಡಲಾಗಿದೆ.
ಸಹಕಾರ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಉಮಾಬಾಯಿ, ಮಧ್ಯಾಹ್ನ 2:00 ಯಿಂದ ರಾತ್ರಿ 8:00 ಗಂಟೆ ವರೆಗೆ ಚಿಕ್ಕಮುನಿಯಪ್ಪ ಹಾಗೂ ರಾತ್ರಿ 8:00 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಪಿಕೆ ಮುರಳೀಧರ ಅವರನ್ನು ನೇಮಕ ಮಾಡಲಾಗಿದೆ.
ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಬೆಳಗ್ಗೆ 8 ರಿಂದ 02.00 ವರೆಗೆ ಶಿಡ್ಲಘಟ್ಟ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ವಿ. ವೆಂಕಟೇಶಮೂರ್ತಿ, ಮಧ್ಯಾಹ್ನ 2:00 ಯಿಂದ ರಾತ್ರಿ 8:00 ಗಂಟೆ ವರೆಗೆ ಎಂ ಮಧು ಹಾಗೂ ರಾತ್ರಿ 8 ಗಂಟೆಯಿಂದ ಬೆಳಗ್ಗೆ ಎಂಟು ಗಂಟೆವರೆಗೆ ಕೆಎಸ್ ಮಂಜುನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : ಚುನಾವಣಾ ಕರ್ತವ್ಯ ವೇಳೆ ಅಸುನೀಗಿದವರಿಗೆ 1ಕೋಟಿ ಪರಿಹಾರ ನೀಡಿ : ಅಲಹಾಬಾದ್ ಹೈಕೋರ್ಟ್