Advertisement

ಖಾಸಗಿ ಕ್ಲಿನಿಕ್‌ ಸ್ಥಗಿತಗೊಳಿಸದಂತೆ ಕಾರ್ಕಳ ಶಾಸಕರ ಮನವಿ

09:48 AM Mar 28, 2020 | sudhir |

ಕಾರ್ಕಳ: ಕಾರ್ಕಳದಲ್ಲಿ ಖಾಸಗಿ ಕ್ಲಿನಿಕ್‌ಗಳು ಮುಚ್ಚಿದ್ದು ವೈದ್ಯರ ಸೇವೆ ದೊರೆಯುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಖಾಸಗಿ ವೈದ್ಯರು ಜನತೆಗೆ ವೈದ್ಯಕೀಯ ಸೇವೆ ನೀಡುವಂತೆ ಶಾಸಕ ವಿ. ಸುನಿಲ್‌ ಕುಮಾರ್‌ ಮನವಿ ಮಾಡಿಕೊಂಡರು.

Advertisement

ಅವರು ಮಾ. 27ರಂದು ತಾ.ಪಂ. ಸಭಾಂಗಣದಲ್ಲಿ ನಡೆದ ಖಾಸಗಿ ವೈದ್ಯರ ಸಭೆಯಲ್ಲಿ ಮಾತನಾಡಿ, ಕೊರೊನಾ ವೈರಸ್‌ನಿಂದ ವಿಶ್ವವೇ ತತ್ತರಿಸಿದೆ. ಇಂತಹ ಸಂದರ್ಭ ಖಾಸಗಿ ವೈದ್ಯರು ಅಗತ್ಯ ಸಲಹೆ-ಸೇವೆ ನೀಡಬೇಕು. ನಿಮ್ಮ ಸಲಹೆ-ಬೇಡಿಕೆ ಕುರಿತು ಸರಕಾರ ಮತ್ತು ತಾಲೂಕು ಆಡಳಿತ ಸ್ವೀಕರಿಸಿ ಸ್ಪಂದಿಸಲಿದೆ. ಖಾಸಗಿ ವೈದ್ಯರು ತಮ್ಮ ಸಂಪರ್ಕ ಸಂಖ್ಯೆಯನ್ನು ಗ್ರಾಮಸ್ಥರಿಗೆ ನೀಡಿ ನೆರವಾಗಬೇಕೆಂದು ಶಾಸಕರು ವಿನಂತಿಸಿಕೊಂಡರು.

ಸಾರ್ವಜನಿಕರು ಕ್ಲಿನಿಕ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ ಎಂಬ ನಿಟ್ಟಿನಲ್ಲಿ ಹೆಚ್ಚಿನ ಕ್ಲಿನಿಕ್‌ಗಳನ್ನು ಮುಚ್ಚಲಾಗಿದೆ ಎಂದು ಡಾ| ರಾಮಚಂದ್ರ ಜೋಷಿ ಹೇಳಿದರು.

ತುರ್ತು ಚಿಕಿತ್ಸೆ ಮಾತ್ರ ಲಭ್ಯ
ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಮಾತ್ರ ನೀಡಲಾಗುವುದು ಎಂದು ತಿಳಿಸಿದ್ದರೂ ತಲೆನೋವು, ಹೊಟ್ಟೆನೋವು ಅಂತ ಜನತೆ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವೆಂದು ಡಾ| ಮಂಜುನಾಥ ಕಿಣಿ ಅಭಿಪ್ರಾಯಪಟ್ಟರು.

ಡಾ| ಸಚ್ಚಿದಾನಂದ ಮಾತನಾಡಿ, ಕೊರೊನಾ ಶಂಕಿತರು ಹಾಗೂ ಸೋಂಕಿತರ ಕುರಿತು ಆರೋಗ್ಯ ಇಲಾಖೆ ಸ್ಪಷ್ಟ ಮಾಹಿತಿ ನೀಡುವುದು ಅಗತ್ಯ. ಇದರಿಂದ ಶಂಕಿತರ ಭಾಗದ ಜನತೆ ಮತ್ತಷ್ಟು ಮುಂಜಾಗ್ರತೆ ಕ್ರಮ ವಹಿಸಿಕೊಳ್ಳಬಹುದಾಗಿದೆ ಎಂದರು.

Advertisement

ಡಾ| ಸುರೇಶ್‌ ಕುಡ್ವ ಮಾತನಾಡಿ, ವೈದ್ಯರಿಗೆ ಅಗತ್ಯವಾಗಿ ಬೇಕಾಗಿದ್ದ ಮಾಸ್ಕ್, ಸ್ಯಾನಿಟೈಜೇಶನ್‌ ಲಿಕ್ವಿಡ್‌ ಅನ್ನು ಸರಕಾರ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಮಾಸ್ಕ್ ದೊರೆತಲ್ಲಿ ಮಾತ್ರ ರೋಗಿಗಳಿಗೆ ಆರೋಗ್ಯ ಸೇವೆ ನೀಡಲು ಅನುಕೂಲವಾಗುವುದರೊಂದಿಗೆ ವೈದ್ಯರಿಂದ ರೋಗಿಗಳಿಗೆ ಕೊರೊನಾ ಹರಡುವುದನ್ನೂ ತಡೆಗಟ್ಟಬಹುದೆಂದರು.

ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕೋವಿಡ್‌ -19 ಟೆಸ್ಟ್‌ಗೆ ಅನುಮತಿ ದೊರೆತಿದ್ದರೂ ಎರಡು ದಿನಗಳ ಬಳಿಕ ಅದನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ನಮ್ಮ ಜಿಲ್ಲೆಯ ರೋಗಿಯ ಗಂಟಲು ದ್ರವ ಸ್ಯಾಂಪಲನ್ನು ಪರೀಕ್ಷೆಗಾಗಿ ದೂರದ ಶಿವಮೊಗ್ಗಕ್ಕೆ ಕಳುಹಿಸಿಕೊಡಬೇಕಾಗುತ್ತಿದೆ. ಅಲ್ಲಿಂದ ವರದಿ ಬರಲು ಮೂರ್‍ನಾಲ್ಕು ದಿನ ವ್ಯಯವಾಗುತ್ತಿದೆ ಎಂದು ಡಾ| ಕೀರ್ತಿನಾಥ್‌ ಬಳ್ಳಾಲ್‌ ಹೇಳಿದರು.

ಡಾ| ಗೀತಾ ನಾಯಕ್‌, ಡಾ| ಆನಂದ ನಾಯಕ್‌ ಕೆಲವೊಂದು ಸಲಹೆ ನೀಡಿದರು.

ತಹಶೀಲ್ದಾರ್‌ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ಮೇ| ಹರ್ಷ ಕೆ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ಸುಮಾರು 30 ಮಂದಿ ಖಾಸಗಿ ವೈದ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next