Advertisement
ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸಲು ರೂಪಿಸಿರುವ ಈ ತಿದ್ದುಪಡಿ ಕಾಯ್ದೆಯನ್ನು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯರಿಗೂ ಅನ್ವಯಿಸುವಂತೆ ತಿದ್ದುಪಡಿ ತರಬೇಕು. ಖಾಸಗಿ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆಗೆ ಸರ್ಕಾರ ಶುಲ್ಕ ನಿಗದಿ ಮಾಡಕೂಡದು. ವೈದ್ಯರ ವಿರುದ್ಧ ದೂರು ದಾಖಲಿಸುವ ಅವಕಾಶ ಹಿಂಪಡೆಯುವ ನಿಟ್ಟಿನಲ್ಲಿ ವಿಧೇಯಕವನ್ನು ಪುನರ್ ಪರಿಶೀಲಿಸಬೇಕು ಎಂದು ಪ್ರತಿಭಟನಾನಿರತ ವೈದ್ಯರು ಆಗ್ರಹಿಸಿದರು. ಬಳಿಕ, ಸರ್ಕಾರಕ್ಕೆ ಈ ಸಂಬಂಧ ಮನವಿ ಸಲ್ಲಿಸಿದರು. ಅಲ್ಲದೆ, ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ರಾಜ್ಯಾದ್ಯಂತ ಹೊರರೋಗಿಗಳು ಪರದಾಡುವಂತಾಯಿತು. ವೈದ್ಯರನ್ನು ಕಾಣಲು ಬೇರೆ ಬೇರೆ ಊರುಗಳಿಂದ ನಗರಗಳಿಗೆ ಬಂದವರಿಗೆ ನಿರಾಸೆ ಕಾದಿತ್ತು. ಕಡೆಗೆ ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದರಿಂದ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋದರು. ಇಲ್ಲಿ ಎಂದಿಗಿಂತ ಹೆಚ್ಚಿನ ಜನ ಬಂದಿದ್ದರು ಎಂದು ಕೆಲವು ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಮಾಹಿತಿ ನೀಡಿದರು. ಆದರೆ ರಾಜ್ಯದ ಎಲ್ಲೂ ಒಳರೋಗಿಗಳಿಗೆ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ. ಈ ವಿಧೇಯಕವನ್ನು ಜನ ವಿರೋಧಿಸಿದರೆ ವಾಪಸ್ ಪಡೆದುಕೊಳ್ಳಲು ಸಿದ್ಧರಿದ್ದೇವೆ. ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿದಾಗ ವಿಧೇಯಕದ ಪ್ರತಿ ನೀಡಿ, ಏನಾದರೂ ಸಮಸ್ಯೆ ಇದ್ದರೆ ತಿಳಿಸಲು ಹೇಳಿದ್ದೆ. ಆಗ, ಏನೂ ಸಮಸ್ಯೆ ಇಲ್ಲವೆಂದು ಸಮಾಧಾನದಿಂದ ಹೋಗಿದ್ದ ಅವರು, ಈಗ ಪ್ರತಿಭಟನೆ ನಡೆಸಿದ್ದಾರೆ.
– ರಮೇಶ್ ಕುಮಾರ್, ಆರೋಗ್ಯ ಸಚಿವ