Advertisement

ಖಾಸಗಿ ಕ್ಲಿನಿಕ್‌ಗಳು ಬಂದ್‌! ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರ ಹಿಂದೇಟು

12:51 AM Mar 21, 2020 | sudhir |

ಬೆಂಗಳೂರು: ಕೊರೊನಾ ಸೋಂಕು ವೈದ್ಯರ ಸೇವೆ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ.

Advertisement

ಕೆಲವು ಖಾಸಗಿ ಕ್ಲಿನಿಕ್‌ಗಳು, ಕಿರು ನರ್ಸಿಂಗ್‌ ಹೋಮ್‌ಗಳ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದಾರೆ. ಅಷ್ಟೇ ಅಲ್ಲ, ಜನರೂ ಸೋಂಕಿನ ಆತಂಕದಿಂದ ಕ್ಲಿನಿಕ್‌ಗಳತ್ತ ಬರುತ್ತಿಲ್ಲ. ಕಲಬುರಗಿಯಲ್ಲಿ ಮೃತಪಟ್ಟ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಕೊರೊನಾ ಸೋಂಕು ತಗುಲಿದ ಮೇಲೆ ಈ ಆತಂಕ ಇನ್ನಷ್ಟು ಹೆಚ್ಚಿದೆ.

ರಾಜ್ಯದ ಹಲವಾರು ಕಡೆ ಸಣ್ಣಪುಟ್ಟ ಖಾಸಗಿ ಕ್ಲಿನಿಕ್‌ಗಳು, ಕಿರು ನರ್ಸಿಂಗ್‌ ಹೋಮ್‌ಗಳು ಸದ್ದಿಲ್ಲದೆ ಬಂದ್‌ ಆಗುತ್ತಿವೆ. ಅನವಶ್ಯಕ ರಿಸ್ಕ್ ಏಕೆ ಎಂಬ ಕಾರಣಕ್ಕೆ ಮುಂಜಾಗ್ರತೆಯ ನೆಪ ಹೇಳಿ ಬಂದ್‌ ಮಾಡುತ್ತಿದ್ದಾರೆ.

ಎಲ್ಲಿ ಹೆಚ್ಚು?
ಸೋಂಕು ಹೆಚ್ಚು ದೃಢಪಟ್ಟಿರುವ, ಶಂಕಿತರಿರುವ ಬೆಂಗಳೂರು, ಕಲಬುರಗಿ, ಹಾಸನ, ದಾವಣಗೆರೆ, ದ.ಕ‌, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಲಿನಿಕ್‌ಗಳು ಬಂದಾಗಿದ್ದು, ಸ್ಥಾಗಿತ್ಯ ಶೇ. 30ರಷ್ಟು ಪ್ರಮಾಣದಲ್ಲಿದೆ ಎಂದು ಅಂದಾಜಿಸಲಾಗಿದೆ.

ಜನರ ಪರದಾಟ
ಒಟ್ಟು ಪರಿಣಾಮವಾಗಿ ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ಗಳನ್ನೇ ಆಶ್ರಯಿಸಿದ್ದ ಜನರಲ್ಲಿ ಪರದಾಟ ಹೆಚ್ಚಿದೆ. ಮೆಡಿಕಲ್‌ ಶಾಪ್‌ ಸಿಬಂದಿ ವೈದ್ಯರ ಚೀಟಿ ಇಲ್ಲದೆ ಸ್ವಯಂ ಔಷಧ ನೀಡುತ್ತಿದ್ದ ತಪ್ಪು ಕ್ರಮಕ್ಕೆ ಕಡಿವಾಣ ಬಿದ್ದಿದೆ. ಇನ್ನೂ ವಿಚಿತ್ರವೆಂದರೆ, ನಕಲಿ ವೈದ್ಯರು ಸದ್ದಿಲ್ಲದೆ ತೆರೆಯ ಮರೆಗೆ ಸರಿದಿದ್ದಾರೆ. ಇದರ ಜತೆಯಲ್ಲೇ ಸರಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳ ಸಂಖ್ಯೆಯಲ್ಲೂ ಶೇ.10 ಇಳಿಮುಖವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Advertisement

ಕಾರಣವೇನು?
– ಸೋಂಕು ಪೀಡಿತರಿಂದ 3 ಮೀ. ಅಂತರ ಕಾಯ್ದುಕೊಳ್ಳ ಬೇಕು ಎಂಬ ಸೂಚನೆ
– ರೋಗಿಗಳು ಸೋಂಕು ಪೀಡಿತರಲ್ಲದಿದ್ದರೂ ಅವರ ಸಂಪರ್ಕದಲ್ಲಿರುವವರು ಸೋಂಕಿಗೆ ಒಳಗಾಗಿರುವ ಸಾಧ್ಯತೆ
– ರೋಗಿ ಗಳ ಸಂಪೂರ್ಣ ಮಾಹಿತಿ ಪಡೆಯುವ ವ್ಯವಸ್ಥೆ ಸೂಕ್ತವಾಗಿಲ್ಲ
– ಬರುವವರಲ್ಲಿ ಸೋಂಕು ದೃಢಪಟ್ಟರೆ ಎಂಬ ಆತಂಕ

ರೋಗಿಗಳ ಸೇವೆಯೇ ವೈದ್ಯರ ಆದ್ಯತೆ. ಖಾಸಗಿ ವೈದ್ಯರು ಕೊರೊನಾ ಆತಂಕಕ್ಕೆ ಒಳಗಾಗದೇ ಕ್ಲಿನಿಕ್‌ಗಳ ವ್ಯವಸ್ಥೆಯನ್ನು ಉತ್ತಮಗೊಳಿಸಿಕೊಂಡು, ಅಗತ್ಯ ಮುಂಜಾಗ್ರತಾ ಕ್ರಮದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಬೇಕು.
– ಡಾ| ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಶಿ, ಭಾರತೀಯ ವೈದ್ಯಕೀಯ ಸಂಘ

– ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next