Advertisement
ದ.ಕ. ಜಿಲ್ಲೆ ಸೇರಿದಂತೆ ಮಂಗಳೂರು ನಗರದಲ್ಲಿ ಜೂನ್ 1ರಿಂದ ಖಾಸಗಿ ಬಸ್ ಸಂಚಾರ ಆರಂಭಿಸುವುದಾಗಿ ಬಸ್ಮಾಲಕರು ಹೇಳುತ್ತಿದ್ದು, ಜಿಲ್ಲಾಡಳಿತದ ಮಾರ್ಗಸೂಚಿಗಾಗಿ ಕಾಯುತ್ತಿದ್ದಾರೆ. ಸದ್ಯ ಜಿಲ್ಲೆಯೊಳಗೆ ಸರಕಾರಿ ಬಸ್‌ಗಳು ಸಂಚರಿಸುತ್ತಿದೆಯೇ ವಿನಃ ಖಾಸಗಿ ಬಸ್ ಸಂಚಾರ ಇನ್ನೂ ಆರಂಭಗೊಂಡಿಲ್ಲ.
ಸಾಮಾನ್ಯ ದಿನಗಳಲ್ಲಿ ಮಂಗಳೂರು ನಗರದಲ್ಲಿ ಒಟ್ಟು 40 ನರ್ಮ್ ಬಸ್‌ಗಳು ಸಂಚರಿಸುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸದ್ಯದಲ್ಲಿಯೇ ನರ್ಮ್ ಬಸ್ ಸಂಚರಿಸುವಂತೆ ಹೇಳಿದ್ದರು. ಆದರೆ, ಇನ್ನೂ ನರ್ಮ್ ಬಸ್ ಸೇವೆ ಆರಂಭವಾಗಿಲ್ಲ. ಜೂನ್ 1 ರಿಂದ ಬಸ್ ಸಂಚಾರ
ಖಾಸಗಿ ಬಸ್‌ಗಳು ಜೂನ್ 1 ರಿಂದ ಸಂಚರಿಸಲಿವೆ. ಈಗಾಗಲೇ ನಮ್ಮ ಬೇಡಿಕೆಯನ್ನು ರಾಜ್ಯ ಸರಕಾರದ ಮುಂದಿಟ್ಟಿದ್ದೇವೆ. ಜೂನ್ ತಿಂಗಳ ಮುನ್ನ ಬೇಡಿಕೆ ಈಡೇರುವ ಭರವಸೆ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್‌ನಲ್ಲಿ ಬಸ್ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದೇವೆ. ಬಸ್ ದರ ಏರಿಕೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು.
– ದಿಲ್‌ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
Related Articles
ಜೂನ್ 1 ರಿಂದ ಯಾವ ಮಾರ್ಗಸೂಚಿಯಲ್ಲಿ ಬಸ್ ಓಡಿಸಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಕ್ತ ಮಾರ್ಗಸೂಚಿ ನೀಡಬೇಕು. ದ.ಕ. ಜಿಲ್ಲಾಡಳಿತದಿಂದ ಈ ಬಗ್ಗೆ ಯಾವುದೇ ರೀತಿಯ ಮಾರ್ಗಸೂಚಿ ಬಂದಿಲ್ಲ. ಈ ಬಗ್ಗೆ ಮಾಹಿತಿ ನೀಡಿದರೆ ಅದಕ್ಕೆ ಬೇಕಾದ ತಯಾರಿ ನಡೆಸುತ್ತೇವೆ.
– ರಾಜವರ್ಮ ಬಲ್ಲಾಳ್, ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ
Advertisement
ಬಸ್ ಮಾಲಕರ ಗೊಂದಲ ಬಸ್ ಕಾರ್ಯಾಚರಣೆ ನಡೆಸುವ ಮುನ್ನ ಏನೆಲ್ಲಾ ಮಾರ್ಗಸೂಚಿ ಅನುಸರಿಸಬೇಕು ಎಂಬ ಬಗ್ಗೆ ಬಸ್ ಮಾಲಕರಲ್ಲಿ ಗೊಂದಲ ಇದೆ. ಒಂದು ವೇಳೆ ಬಸ್ ಕಾರ್ಯಾಚರಣೆ ನಡೆಸಿದರೆ ದಿನಕ್ಕೆ ಎಷ್ಟು ಬಾರಿ ಬಸ್‌ಗೆ ಸ್ಯಾನಿಟೈಸ್ ಮಾಡಬೇಕು, ಎಷ್ಟು ಪ್ರಮಾಣದಲ್ಲಿ ಪ್ರಯಾಣಿಕರು ಸಂಚರಿಸಬಹುದು, ಬಸ್‌ನಲ್ಲಿ ಸ್ಯಾನಿಟೈಸರ್ ಇಡಬೇಕಾ, ನಿಗದಿತ ರೂಟ್‌ನಲ್ಲಿ ಮಾತ್ರ ಸಂಚರಿಸಬೇಕಾ, ಎಲ್ಲೆಲ್ಲಿ ನಿಲುಗಡೆ ನೀಡಬೇಕು, ಬಸ್ ದರ ಏರಿಕೆ ಮಾಡಬೇಕಾ ಸೇರಿದಂತೆ ಅನೇಕ ಗೊಂದಲ ಬಸ್ ಮಾಲಕರಲ್ಲಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಮಾರ್ಗಸೂಚಿ ಪ್ರಕಟಿಸಬೇಕಿದೆ.