Advertisement

ನಗರದಲ್ಲಿ ಖಾಸಗಿ ಬಸ್‌ಗಳಿಗೆ ಏಕರೂಪದ ಬಣ್ಣ

04:26 AM May 04, 2019 | mahesh |

ಮಹಾನಗರ: ನಗರದಲ್ಲಿ ಖಾಸಗಿ ಸಿಟಿ ಬಸ್‌ಗಳಿಗೆ ಏಕರೂಪದ ಬಣ್ಣ ನೀಡುವ ವ್ಯವಸ್ಥೆಯನ್ನು (ಕಲರ್‌ ಕೋಡಿಂಗ್‌) ಅನುಷ್ಠಾನಗೊಳಿಸುವ ವಿಷಯ ಮೂರು ತಿಂಗಳುಗಳ ಹಿಂದೆ ಸ್ಮಾರ್ಟ್‌ ಸಿಟಿ ಸಭೆಯಲ್ಲಿ ಪ್ರಸ್ತಾವನೆಗೆ ಬಂದಿದ್ದು, ಅದು ಇನ್ನೂ ಅಧಿಕೃತವಾಗಿ ಕಾರ್ಯಗತಗೊಂಡಿಲ್ಲ; ಆದರೆ ಕೆಲವು ಮಂದಿ ಬಸ್‌ ಮಾಲಕರು ಸ್ವಯಂ ಪ್ರೇರಿತರಾಗಿ ಅದನ್ನು ಜಾರಿಗೆ ತಂದಿದ್ದಾರೆ.

Advertisement

ಸಿಟಿ ಬಸ್‌ಗಳಿಗೆ ನೀಲಿ ಬಣ್ಣ ನೀಡಿ ಕೆಳ ಭಾಗದಲ್ಲಿ ಬಿಳಿ ಬಣ್ಣದಲ್ಲಿ ಮೂರು ಗೆರೆಗಳನ್ನು ಹಾಕುವ ಮೂಲಕ ಏಕ ರೂಪದ ಬಣ್ಣ ನೀಡುವ ಬಗ್ಗೆ ಸ್ಮಾರ್ಟ್‌ ಸಿಟಿ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲಾಗಿತ್ತು. ಆದರೆ ಆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರ ಬೇಕಾದರೆ ಇನ್ನೊಂದು ಸಭೆಯನ್ನು ಕರೆದು ಚರ್ಚಿಸಬೇಕೆಂದು ಅಂದಿನ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಬಳಿಕ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಯಾವುದೇ ಸಭೆ ನಡೆದಿಲ್ಲ.

ಈ ನಡುವೆ ಕೆಲವು ಖಾಸಗಿ ಬಸ್‌ ಮಾಲ ಕರು ಅಂದಿನ ಸಭೆಯಲ್ಲಿ ಪ್ರಸ್ತಾವಗೊಂಡ ರೀತಿಯಲ್ಲಿ ತಮ್ಮ ಬಸ್‌ಗಳಿಗೆ ಬಣ್ಣವನ್ನು ನೀಡುವ ಮೂಲಕ ಕಲರ್‌ ಕೋಡಿಂಗ್‌ ಅನ್ನು ಸ್ವಯಂ ಸ್ಫೂರ್ತಿಯಿಂದ ಈಗಾಗಲೇ ಜಾರಿಗೆ ತಂದಿದ್ದಾರೆ.

ಬಸ್‌ಗಳಿಗೆ ಏಕ ರೂಪದ ಬಣ್ಣ ಕೊಡು ವುದರಿಂದ ಮಾಲಕರಿಗೆ ಹೆಚ್ಚು ಅನುಕೂಲ; ಅವರು ತಮ್ಮ ಬಸ್‌ ಹೆಚ್ಚು ಆಕರ್ಷಕವಾಗಿ ಕಾಣಬೇಕು ಎಂದು ದುಬಾರಿ ಬೆಲೆಯ ಪೈಂಟ್ ಬಳಸಬೇಕಾಗಿಲ್ಲ; ಬಸ್‌ ಬಾಡಿಯ ಮೇಲೆ ಕಲಾತ್ಮಕ ಚಿತ್ರಗಳನ್ನು ಬಿಡಿಸಲು ಇಲ್ಲಿ ಅವಕಾಶವಿಲ್ಲ. ಹಾಗಾಗಿ ಇದಕ್ಕೆ ತಗಲುವ ಖರ್ಚು ಉಳಿತಾಯವಾಗಲಿದೆ. ಆದರೆ ಪ್ರಯಾಣಿಕರಲ್ಲಿ ಕೆಲವು ಮಂದಿ ಎಲ್ಲ ಬಸ್‌ಗಳು ಸಮಾನವಾಗಿ ಕಾಣುವುದರಿಂದ ಸ್ವಲ್ಪ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದರೆ ಅದು ತಾತ್ಕಾಲಿಕ. ಅವರು ಬಸ್‌ಗಳ ಬೋರ್ಡ್‌ ನೋಡಿಯೇ ಅದು ಎಲ್ಲಿಗೆ ಹೋಗುತ್ತದೆ ಎಂಬುದನ್ನು ತಿಳಿದು ಬಸ್‌ ಹತ್ತಬೇಕಾದ ಪ್ರಮೇಯವಿದೆ. ಕ್ರಮೇಣ ಎಲ್ಲರೂ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಖಂಡಿತ.

ಕೇರಳದಲ್ಲಿ ಈ ವ್ಯವಸ್ಥೆ
ಕೇರಳದಲ್ಲಿ ಎಲ್ಲ ಖಾಸಗಿ ಬಸ್‌ಗಳಿಗೆ ಕಲರ್‌ ಕೋಡಿಂಗ್‌ 2018 ಫೆಬ್ರವರಿ ತಿಂಗಳಿನಿಂದಲೇ ಜಾರಿಗೆ ಬಂದಿದೆ. ಅಲ್ಲಿ ಸಿಟಿ ಬಸ್‌ಗಳಿಗೆ ಹಸುರು ಬಣ್ಣ , ಕೆಳ ಭಾಗದಲ್ಲಿ 3 ಬಿಳಿ ಬಣ್ಣದ ಗೆರೆಗಳು, ಗ್ರಾಮಾಂತರ ಬಸ್‌ಗಳಿಗೆ ನೀಲಿ ಬಣ್ಣ , ಕೆಳ ಭಾಗದಲ್ಲಿ 3 ಬಿಳಿ ಬಣ್ಣದ ಗೆರೆಗಳು ಹಾಗೂ ಲಿಮಿಟೆಡ್‌ ಸ್ಟಾಪ್‌ ಬಸ್‌ಗಳಿಗೆ ಮೆರೂನ್‌ ಕಲರ್‌ ಮತ್ತು ಕೆಳ ಭಾಗದಲ್ಲಿ 3 ಬಿಳಿ ಬಣ್ಣದ ಗೆರೆಗಳು ಇರುವ ಕಲರ್‌ ಕೋಡಿಂಗ್‌ ಅನುಸರಿಸಲಾಗಿದೆ.

Advertisement

ತೀರ್ಮಾನ ಇನ್ನಷ್ಟೇ ಆಗಬೇಕಾಗಿದೆ
ನಗರದಲ್ಲಿ ಖಾಸಗಿ ಬಸ್‌ಗಳಿಗೆ ಏಕರೂಪದ ಬಣ್ಣ ಕೊಡುವ ಬಗ್ಗೆ ಸುಮಾರು 3 ತಿಂಗಳ ಹಿಂದೆ ನಡೆದ ಸಭೆಯಲ್ಲಿ ಪ್ರಸ್ತಾವ ಆಗಿದ್ದು, ಯಾವುದೇ ಪ್ರಗತಿ ಆಗಿಲ್ಲ. ಇನ್ನೊಂದು ಸಭೆ ಕರೆದು ಚರ್ಚಿಸಬೇಕೆಂದು ನಾವು ಅಂದಿನ ಸಭೆಯಲ್ಲಿ ಸಲಹೆ ನೀಡಿದ್ದೆವು. ಆದರೆ ಆ ಬಳಿಕ ಯಾವುದೇ ಸಭೆ ನಡೆದಿಲ್ಲ. ಕಲರ್‌ ಕೋಡಿಂಗ್‌ ಬಗ್ಗೆ ಅಧಿಕೃತ ತೀರ್ಮಾನ ಇನ್ನಷ್ಟೇ ಆಗಬೇಕಾಗಿದೆ.
 ದಿಲ್ರಾಜ್‌ ಆಳ್ವ, ದ.ಕ. ಬಸ್‌ ಮಾಲಕರ ಸಂಘದ ಅಧ್ಯಕ್ಷ

ಪ್ರಸ್ತಾವನೆಯಲ್ಲಿಯೇ ಬಾಕಿ ಇದೆ
ನಗರದಲ್ಲಿ ಖಾಸಗಿ ಬಸ್‌ಗಳಿಗೆ ಏಕ ರೂಪದ ಬಣ್ಣ ನೀಡುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಅಧಿಕೃತ ನಿರ್ಧಾರ ಆಗಿಲ್ಲ. ಅದು ಇನ್ನೂ ಪ್ರಸ್ತಾವನೆ ರೂಪದಲ್ಲಿಯೇ ಇದೆ. ಕಳೆದ ಸ್ಮಾರ್ಟ್‌ ಸಿಟಿ ಸಭೆಯಲ್ಲಿ ಈ ವಿಚಾರ ಪ್ರಸ್ತಾವವಾಗಿದ್ದು, ಚುನಾವಣೆ ಬಂದ ಕಾರಣ ಈ ದಿಶೆಯಲ್ಲಿ ಮುಂದುವರಿಯಲು ಸಾಧ್ಯವಾಗಿಲ್ಲ.
– ಜಾನ್‌ ಮಿಸ್ಕಿತ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು

ಸ್ವಯಂ ಪ್ರೇರಿತವಾಗಿ ಮಾಡಿದ್ದೇವೆ
ನಗರದಲ್ಲಿ ನಮ್ಮ ಸಂಸ್ಥೆಯ ಬಸ್‌ಗಳ ಸಹಿತ ಸುಮಾರು 50ರಷ್ಟು ಬಸ್‌ಗಳಿಗೆ ಪ್ರಸ್ತಾವಿತ ಕಲರ್‌ ಕೋಡಿಂಗ್‌ ಪ್ರಕಾರ ಬಣ್ಣ ಕೊಡಲಾಗಿದೆ. ಬಸ್‌ ಮಾಲಕರು ಸ್ವಯಂ ಪ್ರೇರಿತರಾಗಿ ಈ ಬಣ್ಣ ನೀಡಿದ್ದಾರೆ. ಒಂದಲ್ಲ ಒಂದು ದಿನ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರಬಹುದು. ಹಾಗಾಗಿ ಅನುಸರಿಸಿದ್ದೇವೆ. ಈವ್ಯವಸ್ಥೆ ಜಾರಿಗೆ ಬಂದರೆ ಒಳ್ಳೆಯದು. – ಮಹಮದ್‌ ಹಾಶಿಂ, ಪಿ.ಟಿ.ಸಿ. ಬಸ್‌ ಕಂಪೆನಿ ಮಾಲಕ

ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next