ಕಲಬುರಗಿ: ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಸ್ಥಾನವಾದ ಕಲಬುರಗಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಗಳ ಬದಲಿಗೆ ಖಾಸಗಿ ಬಸ್ ಗಳ ದರ್ಬಾರ್ ಶುರುವಾಗಿದೆ.
ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ರದ್ದಾಗಿದೆ. ನೌಕರರಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಮುಷ್ಕರದ ಮೊದಲ ದಿನವೇ ನಗರದ ಕೇಂದ್ರ ಬಸ್ ನಿಲ್ದಾಣದೊಳಗೆ ಖಾಸಗಿ ಬಸ್ ಗಳನ್ನು ಬಿಡಲಾಗಿದೆ.
ಮುಷ್ಕರದ ನಡುವೆಯೂ ಬೆಳಗ್ಗೆ ಜೇವರ್ಗಿಯ ಕಡೆಗೆ ಒಂದೇ ಒಂದು ಬಸ್ ಸಂಚರಿಸಿತ್ತು. ವಿಜಯಪುರದ ಹೊರಡಲು ಬಸ್ ವೊಂದು ನಿಲ್ದಾಣಕ್ಕೆ ಬಂದರೂ ಪ್ರಯಾಣ ಬೆಳಸದೆ ಡಿಪೋಗೆ ಮರಳಿತು. ಆದರೆ, ಖಾಸಗಿ ಬಸ್ ಗಳು ನಿರಂತರವಾಗಿ ವಿವಿಧ ಭಾಗಗಳಿಗೆ ಸಂಚರಿಸುತ್ತಿವೆ.
ಇದನ್ನೂ ಓದಿ:ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೂ ಮಾಸ್ಕ್ ಕಡ್ಡಾಯ: ದೆಹಲಿ ಹೈಕೋರ್ಟ್
ಬೀದರ್, ವಿಜಯಪುರ, ಬಸವಕಲ್ಯಾಣ, ಚಿಂಚೋಳಿ, ಸುರಪುರ, ಶಹಪುರ, ಕಾಳಗಿ ಸೇರಿದಂತೆ ಹಲವೆಡೆ ಇದುವರೆಗೆ 13ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಕೇಂದ್ರ ಬಸ್ ನಿಲ್ದಾಣದಿಂದಲೇ ಸಂಚರಿಸಿವೆ.
ಕಳೆದ ಒಂದು ದಶಕದ ಹಿಂದೆ ನೌಕರರ ಮುಷ್ಕರ ಇನ್ನೂ ಜೋರಾಗಿತ್ತು. ಆಗ ಮುಷ್ಕರದ ಎರಡ್ಮೂರು ದಿನಗಳ ನಂತರ ಖಾಸಗಿ ಬಸ್ ಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಮುಷ್ಕರದ ಮೊದಲ ದಿನವೇ ಈಗ ಖಾಸಗಿ ಬಸ್ ಗಳಿಗೆ ನೇರವಾಗಿ ಸಾರಿಗೆ ಬಸ್ ನಿಲ್ದಾಣದಿಂದ ಸಂಚರಿಸುವ ಅವಕಾಶ ಸಿಕ್ಕಿದೆ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು.
ಖಾಸಗಿ ಬಸ್ ಗಳಿಂದ ಲೂಟಿ: ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮತ್ತು ವಾಹನಗಳ ಮಾಲೀಕರು ಸಾರ್ವಜನಿಕರಿಂದ ಹಣ ಲೂಟಿಗೆ ಇಳಿದಿದ್ದಾರೆ. ಸಾರಿಗೆ ಬಸ್ ದರದಷ್ಟೇ ಟಿಕೆಟ್ ದರ ಪಡೆಯಬೇಕೆಂದು ಖಾಸಗಿಯವರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೂ, ಹೆಚ್ಚಿನ ಹಣ ಪಡೆಯುವ ಬಗ್ಗೆ ದೂರುಗಳ ಕೇಳಿ ಬಂದಿವೆ.
ಖಾಸಗಿ ಬಸ್ ನವರು ಸರ್ಕಾರಿ ಟಿಕೆಟ್ ದರಕ್ಕಿಂತ ಹೆಚ್ಚು ಹಣವನ್ನು ಪಡೆಯಲಾಗುತ್ತಿದೆ. ಕಲಬುರಗಿಯಿಂದ ಸುರಪುರಕ್ಕೆ ಸಾರಿಗೆಯ ಸಾಮಾನ್ಯ ಬಸ್ ದರ 73 ರೂ. ಇದೆ. ಆದರೆ, ಖಾಸಗಿ ಬಸ್ ನವರು 100 ರೂ. ಕೇಳುತ್ತಿದ್ದಾರೆ ಎಂದು ಪ್ರಯಾಣಿಕ ರವಿ ಎನ್ನುವವರು ಸಾರಿಗೆ ಅಧಿಕಾರಿಗಳ ಮುಂದೆಯೇ ತಮ್ಮ ಅಸಮಾಧಾನ ಹೊರಹಾಕಿದರು.
ಕ್ರಮದ ಎಚ್ಚರಿಕೆ: ನೌಕರರ ಮುಷ್ಕರ ಕಾರಣ ಖಾಸಗಿ ಮತ್ತು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಬಸ್ ದರವನ್ನೇ ಪಡೆಯಬೇಕೆಂದು ಸೂಚಿಸಿ ಅನುಮತಿ ನೀಡಲಾಗುತ್ತದೆ. ಇದನ್ನು ಮೀರಿ ಯಾವುದೇ ಖಾಸಗಿಯವರು ಹೆಚ್ಚಿನ ಪ್ರಯಾಣ ದರ ತೆಗೆದುಕೊಂಡರೇ ಕ್ರಮ ಜರುಗಿಸಲಾಗುತ್ತದೆ ಎಂದು ಕಲಬುರಗಿ ವಿಭಾಗದ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಸಿ.ಮಲ್ಲಿಕಾರ್ಜುನ ‘ಉದಯವಾಣಿ’ಗೆ ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ 1,100 ಮ್ಯಾಕ್ಸಿಕ್ಯಾಬ್‌ಗಳು ಇವೆ. ಹತ್ತಾರು ಖಾಸಗಿ ಬಸ್ ಗಳು ಇವೆ. ಬಸ್ ನಿಲ್ದಾಣದಿಂದ ಸಂಚರಿಸಲು ಅವುಗಳಿಗೆ ಇಲಾಖೆಯಿಂದ ಅನುಮತಿ ಪತ್ರ ನೀಡಲಾಗುತ್ತಿದೆ. ಜತೆಗೆ 300ಕ್ಕೂ ಹೆಚ್ಚು ಶಾಲಾ ಬಸ್ ಗಳು ಇದೆ. ಇವುಗಳನ್ನೂ ಬಳಸಿಕೊಳ್ಳುವ ಚಿಂತನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಕಲ್ಪತರು ನಾಡಿನಲ್ಲಿ ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ ಮೊರೆ ಹೋದ ಪ್ರಯಾಣಿಕರು