Advertisement

ಖಾಸಗಿ ಸರ್ವಿಸ್‌, ಸಿಟಿ ಬಸ್‌ ಟಿಕೆಟ್‌ ದರ ಏರಿಕೆಗೆ ಪ್ರಸ್ತಾವನೆ

02:04 AM Mar 13, 2020 | mahesh |

ಮಂಗಳೂರು: ಕೆಎಸ್ಸಾರ್ಟಿಸಿ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಖಾಸಗಿ ಸರ್ವೀಸ್‌, ಸಿಟಿ ಬಸ್‌ ಟಿಕೆಟ್‌ ದರವನ್ನೂ ಹೆಚ್ಚಿಸುವಂತೆ ಬಸ್‌ ಮಾಲಕರ ಒಕ್ಕೂಟವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರದಲ್ಲೇ ಸಾರಿಗೆ ಇಲಾಖೆ ಸಮಕ್ಷಮ ಬಸ್‌ ಮಾಲಕರ ಸಂಘದ ಸಭೆ ನಡೆಯುವ ಸಾಧ್ಯತೆಯಿದೆ. ಸಭೆಯಲ್ಲಿ ದರ ಏರಿಕೆಗೆ ಒಮ್ಮತ ಮೂಡಿದರೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಲಿದ್ದು, ಬಳಿಕ ಪರಿಷ್ಕೃತ ದರ ಜಾರಿಗೆ ಬರಲಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ರಾಮನಗರ, ತುಮಕೂರು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಜಿಲ್ಲೆಗಳ ಅನೇಕ ಕಡೆ ಖಾಸಗಿ ಸಿಟಿ ಮತ್ತು ಖಾಸಗಿ ಬಸ್‌ ಸಂಚಾರವಿದೆ. ಕರಾವಳಿಯಲ್ಲಿ ಸುಮಾರು 1,200 ಸರ್ವೀಸ್‌ ಬಸ್‌ ಮತ್ತು ಸಿಟಿ ಬಸ್‌ಗಳು ಪ್ರತೀ ದಿನ ಸಂಚರಿಸುತ್ತವೆ.

2013ರಿಂದ ಹೆಚ್ಚಿಸಿಲ್ಲ ಎಂಬ ವಾದ
2013ರಿಂದೀಚೆಗೆ ಸರ್ವಿಸ್‌ ಬಸ್‌ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ. ಆದರೆ ಡೀಸೆಲ್‌ ಸೆಸ್‌ ಆಧಾರದಲ್ಲಿ 2018ರ ಎಪ್ರಿಲ್‌ನಲ್ಲಿ ಮಂಗಳೂರಿನ ಸಿಟಿ ಬಸ್‌ ದರವನ್ನು ಮೊದಲ ಸ್ಟೇಜ್‌ಗೆ 1 ರೂ.ನಂತೆ ಹೆಚ್ಚಿಸಲಾಗಿತ್ತು. ಟೋಲ್‌ ಕಾರಣಕ್ಕೆ ಟೋಲ್‌ ಮೂಲಕ ಸಾಗುವ ಸರ್ವೀಸ್‌ ಬಸ್‌ ದರವನ್ನು ಕೆಲವು ದಿನಗಳ ಹಿಂದೆ ಪ್ರಥಮ ಸ್ಟೇಜ್‌ಗೆ 1 ರೂ. ಹೆಚ್ಚಿಸಲಾಗಿತ್ತು.

ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್‌ಗಳಿಗೆ ಸ್ಟೇಜ್‌ಗೆ 8 ರೂ. ದರ ಇದ್ದು, 10 ರೂ.ಗೆ ಏರಿಕೆ ಮಾಡಬೇಕೆಂದು ಪ್ರಸ್ತಾವಿಸಲಾಗಿದೆ. ಸರ್ವೀಸ್‌ನಲ್ಲಿ ಒಂದು ಕಿ.ಮೀ.ಗೆ ಒಂದು ಟಿಕೆಟ್‌ನಲ್ಲಿ 1.2 ರೂ. ನಷ್ಟ ಉಂಟಾಗುತ್ತಿದೆ. ಇದನ್ನು ಸರಿದೂಗಿಸಲು ದರ ಪರಿಷ್ಕರಣೆ ಮಾಡಬೇಕೆಂದೂ ಪ್ರಸ್ತಾವನೆಯಿದೆ.

ಖಾಸಗಿ ಬಸ್‌ ಮಾಲಕರೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, 2013ರಿಂದ ಈವರೆಗೆ ಡೀಸೆಲ್‌ ದರದಲ್ಲಿ ಸುಮಾರು 14 ರೂ. ಏರಿಕೆಯಾದರೂ ಖಾಸಗಿ ಬಸ್‌ ಪ್ರಯಾಣ ದರ ಪರಿಷ್ಕರಣೆ ಮಾಡಿಲ್ಲ. ಮಂಗಳೂರಿನಿಂದ ಕುಂದಾಪುರಕ್ಕೆ 4 ಟೋಲ್‌ ದಾಟಬೇಕು. ಒಂದು ಬಸ್‌ಗೆ ದಿನಕ್ಕೆ ಸುಮಾರು 750 ರೂ. ಟೋಲ್‌ ಪಾವತಿಸ ಬೇಕಾಗುತ್ತದೆ. ಸರಕಾರವು ಬಸ್‌ ನಿರ್ಮಾಣಕ್ಕೆ ಬಾಡಿ ಕೋಡ್‌ ರಚನೆ ಮಾಡಿದ್ದು, ಪರವಾನಿಗೆ ಹೊಂದಿರುವ ಸಂಸ್ಥೆ ಮಾತ್ರ ಬಾಡಿ ನಿರ್ಮಿಸಬೇಕು. ಇದರಿಂದಾಗಿ ಹೊಸ ಬಸ್‌ ಖರೀದಿ ಮೇಲೆ ಸುಮಾರು 2 ಲಕ್ಷ ರೂ. ಹೆಚ್ಚು ಪಾವತಿಸಬೇಕಾಗುತ್ತದೆ. ಬಸ್‌ ಮಾಲಕರು ಈಗಾಗಲೇ ನಷ್ಟದಲ್ಲಿದ್ದು, ಖಾಸಗಿ ಸಾರಿಗೆ ಉದ್ಯಮ ಉಳಿಯಲು ದರ ಏರಿಕೆ ಅನಿವಾರ್ಯ ಎಂದಿದ್ದಾರೆ.

Advertisement

ಪ್ರಯಾಣಕ್ಕೆ ರಸ್ತೆ ತೆರಿಗೆ ಭಾರ
ಮಂಗಳೂರು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರ ಪ್ರಕಾರ, ಮಂಗಳೂರು ನಗರದಲ್ಲಿ ಹೊಸ ಬಸ್‌ ಖರೀದಿದಾರರ ಸಂಖ್ಯೆ ಇಳಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ಶೇ. 15ರಷ್ಟು ಇಳಿಕೆಯಾಗಿದೆ. ರಸ್ತೆ ತೆರಿಗೆ ಏರಿಕೆಯಾಗಿದ್ದು, ನಾಲ್ಕು ವರ್ಷಗಳಲ್ಲಿ ನಗರ ಸಾರಿಗೆಗೆ ತಿಂಗಳಿಗೆ 16 ಸಾವಿರ ರೂ. ಇದ್ದುದು 28 ಸಾವಿರ ರೂ.ಗೆ ಏರಿದೆ. ಗ್ರಾಮಾಂತರ ಸಾರಿಗೆಗೆ 22 ಸಾವಿರ ರೂ. ಇದ್ದುದು 36 ಸಾವಿರ ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಒಪ್ಪಂದದ ಮೇಲಿನ ಬಸ್‌ಗೆ 50 ಸಾವಿರ ರೂ. ಇದ್ದುದು 89 ಸಾವಿರ ರೂ.ಗೆ ಏರಿಕೆಯಾಗಿದೆ. ಇದನ್ನು ಕೂಡ ಮುಂಗಡವಾಗಿ ಪಾವತಿ ಮಾಡುತ್ತೇವೆ ಎನ್ನುತ್ತಾರೆ.

ಬಸ್‌ ಮಾಲಕರ ಒಕ್ಕೂಟದ ಮನವಿಯನ್ನು ಪರಿಶೀಲಿಸಲಾಗುವುದು. ಕೆಎಸ್‌ಆರ್‌ಟಿಸಿ
ಬಸ್‌ ಪ್ರಯಾಣ ದರವನ್ನು ಸರಕಾರವು ಏಕಾಏಕಿ ಹೆಚ್ಚಿಸಿಲ್ಲ. ಪ್ರಥಮ ಸ್ಟೇಜ್‌ ದರವನ್ನು ಈಗಿರುವ ದರಕ್ಕಿಂತ ಕಡಿಮೆ ಮಾಡಲಾಗಿದೆ. ಅಂತೆಯೇ ಮೊದಲ 15 ಕಿ.ಮೀ. ವರೆಗೆ
ದರ ಹೆಚ್ಚಳ ಮಾಡಿಲ್ಲ.
– ಲಕ್ಷ್ಮಣ ಸವದಿ, ಸಾರಿಗೆ ಸಚಿವ

ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇತ್ತೀಚೆಗೆ ಕೆಎಸ್ಸಾರ್ಟಿಸಿ ಬಸ್‌ ದರ ಪರಿಷ್ಕರಣೆ ಮಾಡುವ ವೇಳೆ ಸರ್ವಿಸ್‌ ಬಸ್‌ ದರವನ್ನೂ ಹೆಚ್ಚಳ ಮಾಡಬೇಕಿತ್ತು. ಬಸ್‌ ಮಾಲಕರು ನಷ್ಟ ಅನುಭವಿಸುತ್ತಿದ್ದಾರೆ.
– ರಾಜವರ್ಮ ಬಲ್ಲಾಳ್‌, ರಾಜ್ಯ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next