ವಿಜಯಪುರ: ಕಳ್ಳತನ ಆರೋಪದಲ್ಲಿ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬ ಮಂಗಳವಾರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಾವಿನ ಸಂಶಯದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ತನಿಖೆಗೆ ಆಗ್ರಹಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ವಿಚಾರಣಾಧೀನ ಖೈದಿಯನ್ನು ಬಸಪ್ಪ ಸಂಜೀವಪ್ಪ ತಳವಾರ (32) ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮೃತ ಯುವಕ, ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ವಾಸಿಸುತ್ತಿದ್ದ. ಸೆ.28 ರಂದು ಆಲಮಟ್ಟಿಯಲ್ಲಿ ಜರುಗಿದ ಕಳ್ಳತನ ಅರೋಪದಲ್ಲಿ ಪೊಲೀಸರು ಬಸಪ್ಪನನ್ನು ಬಂಧಿಸಿದ್ದ ಆಲಮಟ್ಟಿ ಪೊಲೀಸರು, ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳಿಸಿದ್ದರು.
ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಸಿಬಿಐ ದುರುಪಯೋಗ: ಮಂಡ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ
ಎರಡು ದಿನಗಳ ಹಿಂದೆ ಬಸಪ್ಪನಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಜಯಪುರ ಜೈಲು ಅಧಿಕಾರಿಗಳು ಖೈದಿ ಬಸಪ್ಪನನ್ನು ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ವಿಜಯಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರುವ ಬಸಪ್ಪನ ಶಿವ ಪರೀಕ್ಷೆಗೆ ನಿರ್ಧರಿಸಲಾಗಿದೆ.
ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ಮಧ್ಯೆ ತಮ್ಮ ಮಗನ ಸಾವಿನಲ್ಲಿ ಅನುಮಾನವಿದ್ದು, ತನಿಖೆ ನಡೆಸುವಂತೆ ಆಗ್ರಹಿಸಿರುವ ಮೃತ ಬಸಪ್ಪನ ಕುಟುಂಬ ಸದಸ್ಯರು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.