ಹನೂರು: ಸಾಲೂರು ಮಠಕ್ಕೆ ಶತಮಾನಗಳ ಶ್ರೀಪರಂಪರೆಯಿದೆ. ಸಮಾಜ ಸೇವೆ ಮೂಲಕ ಮಠದ ಪ್ರಗತಿಗೆ ಆದ್ಯತೆ ನೀಡ ಬೇಕು ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಯಾದ ವಟು ನಾಗೇಂದ್ರ ಅವರಿಗೆ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀಕ್ಷೇತ್ರ ಮಲೆ ಮಹ ದೇಶ್ವರ ಬೆಟ್ಟಕ್ಕೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರಿಗೂ ಸಾಲೂರು ಬೃಹನ್ಮಠಕ್ಕೂ ಸಂಬಂಧವಿದ್ದು, ಐತಿಹಾಸಿಕ ಹಿನ್ನೆಲೆಯಿದೆ. ಅಲ್ಲದೆ, ಶ್ರೀಕ್ಷೇತ್ರದಲ್ಲಿ ನಡೆಯುವ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಮಠದ ಸ್ವಾಮೀಜಿಗಳು ಭಾಗವಹಿಸುವುದು ಹಿರಿಮೆಯಾಗಿದೆ. ಆದ್ದರಿಂದ ಮಠದ ಸಂಪ್ರದಾಯದ ಜೊತೆಗೆ ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಠದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಕಿವಿಮಾತು ಹೇಳಿದರು.
ಸಾಲೂರು ಮಠದಲ್ಲಿ ಪಟ್ಟದ ಗುರುಸ್ವಾಮಿ ಗಳಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಮಠದ ಭಕ್ತರು ತಮ್ಮ ಬಳಿ ಬಂದು ಉತ್ತರಾಧಿಕಾರಿ ಆಯ್ಕೆ ಮಾಡಿಕೊಡುವಂತೆ ಮನವಿ ಮಾಡಿದರು. ಈ ಹಿನ್ನೆಲೆ 9 ಪದಾಧಿಕಾರಿಗಳ ಆಯ್ಕೆ ಸಮಿತಿ ಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯು ಉತ್ತರಾಧಿಕಾರಿ ಸ್ಥಾನಕ್ಕೆ ವಟು ನಾಗೇಂದ್ರ ಅವರೇ ಸೂಕ್ತ ಎಂದು ಅಂತಿಮ ವರದಿ ನೀಡಿದ ಹಿನ್ನೆಲೆ ಪಟ್ಟಾಭಿಷೇಕ ನೆರವೇರಿಸಲಾಗುತ್ತಿದೆ ಎಂದರು.
ಮಕ್ಕಳಿಗೆ ವಿದ್ಯಾದಾನ: ಶಾಸಕ ನರೇಂದ್ರ ಮಾತನಾಡಿ, ಸಾಲೂರು ಮಠದ ಗುರು ಸ್ವಾಮಿಗಳ ಆರೋಗ್ಯ ಕ್ಷೀಣಿಸಿದ್ದ ಹಿನ್ನೆಲೆ ಮಠದ ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯ ಗಳಿಗೆ ಮಂಕು ಕವಿದಂತಾಗಿತ್ತು. ಇದೀಗ ಉತ್ತರಾಧಿಕಾರಿ ಆಯ್ಕೆಯಾಗಿರುವುದರಿಂದ ಆ ಮಂಕು ಸರಿದಂತಾಗಿದೆ. ಮುಂದಿನ ದಿನಗಳಲ್ಲಿ ಮಠದ ಶೈಕ್ಷಣಿಕ ಸಂಸ್ಥೆಯಿಂದ ಮಹದೇಶ್ವರ ಬೆಟ್ಟ ಸುತ್ತಮುತ್ತಲ 26 ಹಳ್ಳಿಗಳ ಮಕ್ಕಳಿಗೆ ವಿದ್ಯಾದಾನ ನೀಡಬೇಕು. ಈ ಮೂಲಕ ಮಠವನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯ ಬೇಕು ಎಂದು ಮನವಿ ಮಾಡಿದರು.
ಪಟ್ಟಾಭಿಷೇಕ ಕಾರ್ಯಕ್ರಮ: ಉತ್ತರಾಧಿಕಾರಿಗೆ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ಶನಿವಾರ ಪೂಜಾ ಕೈಂಕರ್ಯಗಳನ್ನು ವಿಧಿವಿಧಾನಗ ಳೊಂದಿಗೆ ನೆರವೇರಿಸಲಾಯಿತು. ಬೆಳಗ್ಗೆಯೇ ಪಂಚ ಕಳಸ ಪೂಜೆ, ಗದ್ದುಗೆಗಳಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಶತನಾಮಾವಳಿಗಳು ನಡೆಯಿತು. ಈ ವೇಳೆ ವಟು ನಾಗೇಂದ್ರ ಅವರು ನಾಡಿನ ಮೂರು ಮಠಗಳಾದ ಸುತ್ತೂರುಶ್ರೀ, ಸಿದ್ಧ ಗಂಗಾಶ್ರೀ ಮತ್ತು ಕನಕಪುರದ ದೇಗುಲ ಮಠದ ಶ್ರೀಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಸಾಂಪ್ರದಾಯಿಕವಾಗಿ ದೀಕ್ಷೆ ನೀಡಿ ಶಾಂತಮಲ್ಲಿಕಾರ್ಜುನ ಸ್ವಾಮಿ ಎಂದು ನಾಮಕರಣ ಮಾಡಲಾಯಿತು. ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಗುಂಡ್ಲುಪೇಡೆ ಶಾಸಕ ನಿರಂಜನ್‌ಕುಮಾರ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಪಟ್ಟದ ಗುರುಸ್ವಾಮಿಗಳು, ಉತ್ತರಾಧಿಕಾರಿ ಆಯ್ಕೆ ಸಮಿತಿ ಅಧ್ಯಕ್ಷ ಶಾಗ್ಯ ರವಿ, ನಿರ್ದೇಶಕ ತೋಟೇಶ್ ಹಾಜರಿದ್ದರು.