Advertisement

ಈಶಾನ್ಯ ರಾಜ್ಯಗಳ ಶ್ರೇಯಸ್ಸಿಗೆ ಆದ್ಯತೆ ಅಗತ್ಯ

09:35 AM May 07, 2022 | Team Udayavani |

ದೇರಳಕಟ್ಟೆ: ಈಶಾನ್ಯ ರಾಜ್ಯಗಳ ಶ್ರೇಯಸ್ಸಿಗೆ ಆದ್ಯತೆಯನ್ನು ನೀಡಿದಲ್ಲಿ ಅಲ್ಲಿನ ರಾಜ್ಯಗಳ ನಾಗರಿಕರು ಅಭಿವೃದ್ಧಿ ಪಥಕ್ಕೆ ಸೇರಲು ಸಾಧ್ಯವಾಗುವುದು ಎಂದು ನಾಗಾಲ್ಯಾಂಡ್‌ನ‌ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಸಲಹೆ ನೀಡಿದರು.

Advertisement

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕ ಹಾಗೂ ನಮಸ್ತೆ ಕೇಂದ್ರವು ಜಂಟಿಯಾಗಿ ಹಮ್ಮಿಕೊಂಡಿದ್ದ ‘ಆಜಾದಿ ಕಾ ಅಮೃತ್‌ ಮಹೋತ್ಸವ್‌’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಈಶಾನ್ಯ ರಾಜ್ಯಗಳು ಭಾರತದಲ್ಲಿ ಅತೀ ಕಡಿಮೆ ಅಭಿವೃದ್ಧಿ ಕಂಡಿವೆ. ಈ ರಾಜ್ಯಗಳನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳದಿದ್ದುದು ಇದಕ್ಕೆ ಮುಖ್ಯವಾದ ಕಾರಣ. ಇಲ್ಲಿನ ನಾಗರಿಕರನ್ನು ಸಮಾನವಾಗಿ ಪರಿಗಣಿಸದೇ ಅವರನ್ನು ದೂರ ಇಡಲಾಗಿತ್ತು. ನಿರಂತರ ಪ್ರಯತ್ನ, ಕಾಳಜಿಯ ಫಲವಾಗಿ ಈಗ ಅಭಿವೃದ್ಧಿ ಕಾಣಿಸಿಕೊಳ್ಳಲು ಶುರುವಾಗಿದೆ. ನಾನು ನಾಗಾಲ್ಯಾಂಡ್‌ ರಾಜ್ಯಪಾಲನಾಗಿದ್ದಾಗ ಈಶಾನ್ಯ ರಾಜ್ಯಗಳ ಶ್ರೇಯಸ್ಸಿಗಾಗಿ ಶ್ರಮಿಸಿದೆ. ಪ್ರತಿಷ್ಠಿತ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವನ್ನು ಜತೆ ಸೇರಿಸಿಕೊಂಡು ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಮೀಜೋರಾಂ, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ, ತ್ರಿಪುರ ರಾಜ್ಯಗಳ ಶ್ರೇಯಸ್ಸಿಗಾಗಿ ‘ನಮಸ್ತೆ’ ಕೇಂದ್ರವನ್ನು ನಿಟ್ಟೆ ಪರಿಗಣಿತ ವಿವಿಯಲ್ಲಿ ಸ್ಥಾಪಿಸಲಾಯಿತು.

ಇದರ ಫಲವಾಗಿ ಸಾಕಷ್ಟು ಶೈಕ್ಷಣಿಕ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ನಿಟ್ಟೆ ಪರಿಗಣಿತ ವಿ.ವಿ. ಉಚಿತವಾಗಿ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಇತರ ಕೋರ್ಸ್‌ಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭ ಪಿ.ಬಿ.ಆಚಾರ್ಯ ಅವರು ಈಶಾನ್ಯ ರಾಜ್ಯಗಳನ್ನು ಪರಿಚಯಿಸುವ 5 ಕೃತಿಗಳನ್ನು ವಿಶ್ವವಿದ್ಯಾನಿಲಯಕ್ಕೆ ಕೊಡುಗೆಯಾಗಿ ನೀಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಸಚಿವೆ ಪ್ರೊ| ಅಲ್ಕಾ ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಅನಿರ್ಬಾನ್‌ ಚಕ್ರವರ್ತಿ ಪ್ರಸ್ತಾವಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕದ ಮುಖ್ಯಸ್ಥ ಶಶಿಕುಮಾರ ಶೆಟ್ಟಿ ವಂದಿಸಿದರು.

Advertisement

ಎಲ್ಲ ಜನರ, ರಾಜ್ಯಗಳ ಅಭಿವೃದ್ಧಿಯಾದರೆ ದೇಶದ ಪ್ರಗತಿ

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಸತೀಶ್‌ ಕುಮಾರ ಭಂಡಾರಿ, ದೇಶದ ಎಲ್ಲ ಜನರ, ಎಲ್ಲ ರಾಜ್ಯಗಳ ಅಭಿವೃದ್ಧಿಯಾದರೆ ಮಾತ್ರ ಒಟ್ಟಾರೆಯಾಗಿ ದೇಶದ ಪ್ರಗತಿ ಸಾಧ್ಯವಾಗುವುದು. ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿ ಕಾರ್ಯದಲ್ಲಿ ಒಳಗೊಳ್ಳಬೇಕು. ಈಶಾನ್ಯ ರಾಜ್ಯಗಳ ಪ್ರಗತಿಗಾಗಿ ದುಡಿದಿರುವ ಪಿ.ಬಿ.ಆಚಾರ್ಯ ಅವರ ಶ್ರಮವನ್ನು ನಾವೆಲ್ಲರೂ ಗುರುತಿಸಬೇಕಾದ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next